ವಿಜಯವಾಣಿ ಸುದ್ದಿಜಾಲ ಮದ್ದೂರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ಥಳೀಯ ಗ್ರಾಮ ಆಡಳಿತಾಧಿಕಾರಿಗಳ ಸಂಘಟನೆಯಿಂದ ತಹಸೀಲ್ದಾರ್ ಡಾ.ಸ್ಮಿತಾರಾಮು ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು. ಪಟ್ಟಣದ ತಾಲೂಕು ಕಚೇರಿ ಬಳಿ ಸಮಾವೇಶಗೊಂಡ ಗ್ರಾಮ ಆಡಳಿತಾಧಿಕಾರಿಗಳ ಸಂಘಟನೆ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಸಮಸ್ಯೆ ವಿವರಿಸಿ, ಕ್ರಮ ವಹಿಸಲು ಒತ್ತಾಯಿಸಿದರು. ಇಲಾಖೆಯ ಮೊಬೈಲ್ ಆ್ಯಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಹಲವು ಸಮಸ್ಯೆಗಳು ಎದುರಾಗಿವೆ. ಕಂದಾಯ ಇಲಾಖೆ ಅಭಿವೃದ್ಧಿ ಪಡಿಸಿರುವ 17ಕ್ಕೂ ಅಧಿಕ ಮೊಬೈಲ್ ತಂತ್ರಾಂಶಗಳು ಇವೆ. ಇವುಗಳ ಸಮರ್ಥ ನಿರ್ವಹಣೆಗಾಗಿ ಅವಶ್ಯಕವಾಗಿ ಬೇಕಾಗಿರುವ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಸ್ಕ್ಯಾನರ್, ಪ್ರಿಂಟರ್ ಮತ್ತು ಇಂಟರ್‌ನೆಟ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು.