ಒಳಚರಂಡಿ ನೀರಿನಿಂದ ಕೆಮ್ಮಣ್ಣು ನಾಲೆ ಕಲುಷಿತ: ಕ್ರಮ ಕೈಗೊಳ್ಳುವಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ

1 (4)
Published on

ಮದ್ದೂರು: ಪಟ್ಟಣದ ಸರ್ ಎಂ.ವಿಶ್ವೇಶ್ವರಯ್ಯನಗರದ 8ನೇ ಕ್ರಾಸ್ ಯುಜಿಡಿ ಹಾಗೂ ಚರಂಡಿ ನೀರು ನೇರವಾಗಿ ಕೆಮ್ಮಣ್ಣು ನಾಲೆ ಸೇರುತ್ತಿದೆ ಹಾಗೂ 9ನೇ ಕ್ರಾಸ್‌ನ ಕೆಮ್ಮಣ್ಣು ನಾಲೆಯ ಸಮೀಪದ ರಸ್ತೆಯಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದರೂ ಪುರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷೃ ವಹಿಸಿದ್ದಾರೆ.
8ನೇ ಕ್ರಾಸ್‌ನ ಯುಜಿಡಿ ಮತ್ತು ಚರಂಡಿ ನೀರು ಭಾರಿ ಪ್ರಮಾಣದಲ್ಲಿ ಹಲವಾರು ವರ್ಷಗಳಿಂದ ಕೆಮ್ಮಣ್ಣು ನಾಲೆಗೆ ಸೇರುತ್ತಿರುವುದರಿಂದ ನಾಲೆಯ ನೀರು ಕಲುಷಿತಗೊಂಡಿದ್ದು, ಇಡೀ ವಾತಾವರಣ ಗಬ್ಬೆದ್ದು ನಾರುತ್ತಿದೆ. ಜತೆಗೆ ನಾಲೆಗೆ ನೀರನ್ನು ಹಲವಾರು ಗ್ರಾಮಗಳ ರೈತರು ಜಮೀನುಗಳಿಗೆ ಮತ್ತು ದಿನಬಳಕೆಗೆ ಬಳಕೆ ಮಾಡುವುದರಿಂದ ಚರ್ಮರೋಗ ಸೇರಿದಂತೆ ಇತರ ಕಾಯಿಲೆಗಳು ಕಾಣಿಸಿಕೊಳ್ಳುವ ಅತಂಕ ಮನೆ ಮಾಡಿದೆ.
ಹಲವು ತಿಂಗಳಿಂದ ಒಳಚರಂಡಿ ನೀರು ನೇರವಾಗಿ ನಾಲೆಗೆ ಸೇರುತ್ತಿರುವುದರಿಂದ ಸೊಳ್ಳೆ, ರೋಗ ಹರಡುವ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರು ಆತಂಕದಲ್ಲೇ ದಿನಗಳನ್ನು ದೂಡಬೇಕಾಗಿದೆ. ನಾಲೆಯಲ್ಲಿ ನೀರು ಬಂದಾಗ ಹೆಚ್ಚಿನ ಸಮಸ್ಯೆ ಕಂಡುಬರುವುದಿಲ್ಲ. ನಾಲೆಯಲ್ಲಿ ನೀರು ಹರಿಯದಿದ್ದಾಗ ಒಳಚರಂಡಿ, ಚರಂಡಿ ಹಾಗೂ ಕಲುಷಿತ ವಸ್ತುಗಳು ಸೇರಿಕೊಂಡು ದುರ್ವಾಸನೆ ಬೀರುತ್ತದೆ.
ಇದೇ ಬಡಾವಣೆಯ 9ನೇ ಕ್ರಾಸ್‌ನಲ್ಲಿ ಚನ್ನಸಂದ್ರಕ್ಕೆ ಹೋಗುವ ನಾಲೆಯ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರು ಕಲುಷಿತ ವಸ್ತುಗಳು ಹಾಗೂ ಇತರ ತ್ಯಾಜ್ಯಗಳನ್ನು ತಂದು ಹಾಕುತ್ತಿರುವುದರಿಂದ ಗಬ್ಬೆದ್ದು ನಾರುತ್ತಿದೆ. ಜತೆಗೆ ರಸ್ತೆಯ ಬದಿಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಿಲ್ಲ. ಡಾಂಬರೀಕರಣ ಮಾಡದ ಕಾರಣ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವುದೇ ಕಷ್ಟವಾಗುತ್ತಿದೆ.
ಕೂಡಲೇ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸರ್ ಎಂ.ವಿಶ್ವೇಶ್ವರಯ್ಯನಗರದ 8ನೇ ಕ್ರಾಸ್‌ನ ಯುಜಿಡಿ, ಚರಂಡಿ ನೀರು ನೇರವಾಗಿ ಕೆಮ್ಮಣ್ಣು ನಾಲೆ ಸೇರುವುದನ್ನು ನಿಲ್ಲಿಸಬೇಕು ಹಾಗೂ 9ನೇ ಕ್ರಾಸ್‌ನ ಕೆಮ್ಮಣ್ಣು ನಾಲೆಯ ಸಮೀಪದ ಚನ್ನಸಂದ್ರಕ್ಕೆ ಹೋಗುವ ರಸ್ತೆಯಲ್ಲಿ ಕಸದ ರಾಶಿ ತೆರವುಗೊಳಿಸಲು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಬಡಾವಣೆಯ ನಿವಾಸಿಗಳು ಮನವಿ ಮಾಡಿದ್ದಾರೆ.
ನಾಲೆಯ ಕೊನೇ ಭಾಗಕ್ಕೆ ತಲುಪದ ನೀರು: ಕೆಮ್ಮಣ್ಣು ನಾಲೆಯಲ್ಲಿ ಗಿಡಗಂಟಿಗಳನ್ನು ತೆರವುಗೊಳಸದ ಹಿನ್ನೆಲೆಯಲ್ಲಿ ನೀರು ತಾಲೂಕಿನ ಕೊನೆಯ ಭಾಗಕ್ಕೆ ತಲುಪದೆ ರೈತರಿಗೆ ತೊಂದರೆ ಆಗುತ್ತಿದೆ. ಜತೆಗೆ ಗಿಡಗಂಟಿಗಳು ಬೆಳೆದಿರುವುದಿರಂದ ನಾಲೆಯ ಸಮೀಪ ವಾಸಿಸುವ ನಿವಾಸಿಗಳಿಗೂ ತುಂಬ ಸಮಸ್ಯೆ ಆಗಿದೆ. ಕಾವೇರಿ ನೀರಾವರಿ ನಿಗಮ ಹಾಗೂ ಪುರಸಭೆ ಅಧಿಕಾರಿಗಳು ಈ ಸಂಬಂಧ ಅಗತ್ಯ ಕ್ರಮ ಕೈಗೊಂಡು ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು ಪ್ರತಿಕ್ರಿಯಿಸಿ, ಕೆಮ್ಮಣ್ಣು ನಾಲೆಯಲ್ಲಿ ನೀರು ಕಡಿಮೆಯಾದ ನಂತರ ನಾಲೆಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಕೆಮ್ಮಣ್ಣು ನಾಲೆಯಿಂದ ಚನ್ನಸಂದ್ರಕ್ಕೆ ಹೋಗುವ ಜಮೀನು ರಸ್ತೆ ಮಾಡಿಸಲು ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದ್ದು ಶೀಘ್ರವಾಗಿ ರಸ್ತೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net