

ಕೆ.ಎಂ.ದೊಡ್ಡಿ: ನಾನು ರಾಜಕೀಯಕ್ಕೆ ಬಂದಿರುವುದು ಜನರ ಸೇವೆ ಮಾಡಲು ಹೊರತು ದ್ವೇಷ ರಾಜಕಾರಣ ಮಾಡಲು ಅಲ್ಲ. ಮದ್ದೂರು ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂಬುವುದೇ ನನ್ನ ಗುರಿ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಕಾಡುಕೊತ್ತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜಕಾರಣ ಚುನಾವಣಾ ಸಂದರ್ಭದಲ್ಲಿ ಮಾತ್ರ, ಇನ್ನುಳಿದ ವೇಳೆ ಕ್ಷೇತ್ರದ ಜನರ ಸಮಸ್ಯೆ ಮತ್ತು ಅಭಿವೃದ್ಧಿಯತ್ತ ನನ್ನ ಚಿತ್ತ. ನಾನು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ, ನಾನು ಹಿಡಿದ ಕೆಲಸ ಬಿಡುವುದಿಲ್ಲ. ಹೆಚ್ಚಿನದಾಗಿ ಜನರ ಸಮಸ್ಯೆಗೆ ಆದ್ಯತೆ ನೀಡುತ್ತೇನೆ. ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದು, ಅವುಗಳನ್ನು ಬಗೆಹರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರು ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿ. ಉಳಿದ ವೇಳೆ ಗ್ರಾಮಗಳ ಅಭಿವೃದ್ಧಿ ಕಡೆ ಗಮನ ಹರಿಸಿ. ನಿಮ್ಮ ಗ್ರಾಮಗಳ ಅಭಿವೃದ್ಧಿಗೆ ನೇರವಾಗಿ ನನ್ನನ್ನು ಭೇಟಿ ಮಾಡಿ ಚರ್ಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.
ಚುನಾವಣೆ ಹಿಂದೆ ಯಾವ ರೀತಿ ಮಾತುಕೊಟ್ಟಿದ್ದೆನೋ ಅದೇ ರೀತಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದ್ದು, ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿಲ್ಲಿ ತಾಲೂಕು ಕಚೇರಿಯಲ್ಲಿ ಕಚೇರಿ ತೆರದಿದ್ದು, ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಇತ್ಯರ್ಥಪಡಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಅನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡುತಿದ್ದು, ಕಾರ್ಯಕರ್ತರೂ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕಾರ್ಯೋನ್ಮುಖರಾಗಬೇಕು ಎಂದು ಕಿವಿಮಾತು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯ ಎ.ಎಸ್.ರಾಜೀವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಹಿಂದುಳಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಿಸಿದ್ದಯ್ಯ, ತಾ.ಪಂ. ಮಾಜಿ ಅಧ್ಯಕ್ಷ ಕಪನೀಗೌಡ, ಮುಖಂಡರಾದ ಗೌಡಪ್ಪ, ಕೆ.ಸಿ.ಮಹದೇವು, ಸ್ವಾಮಿ, ಮಾದರಹಳ್ಳಿ ಕೆಂಪಣ್ಣ ಇತರರು ಇದ್ದರು.