ಎಂಎಲ್‌ಸಿ ವರ್ಸಸ್ ಎಂಎಲ್‌ಎ: ಮದ್ದೂರು ಕಾಂಗ್ರೆಸ್‌ನಲ್ಲಿ ಶೀತಲ ಸಮರ

Maddur Congress MLA vs MLC mandya
Published on

ಮಂಡ್ಯ: ಮದ್ದೂರು ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಹಾಗೂ ಶಾಸಕ ಕದಲೂರು ಉದಯ್ ನಡುವೆ ನಡೆಯುತ್ತಿರುವ ಶೀತಲ ಸಮರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸ್ಫೋಟಗೊಳ್ಳುವ ಮುನ್ಸೂಚನೆ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಮಧು ಅವರು ಮುಂಬರುವ ಎಂಪಿ ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ತೀರ್ಮಾನ ಘೋಷಿಸಿರುವುದು ‘ಕೈ’ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಬಹಿರಂಗೊಳಿಸಿದೆ.
ಇಬ್ಬರು ನಾಯಕರು ಮದ್ದೂರು ವಿಧಾನಸಭಾ ಕ್ಷೇತ್ರದವರೇ ಆಗಿದ್ದರೂ, ವಿಧಾನಸಭಾ ಚುನಾವಣೆ ಸಮಯದಲ್ಲಿಯೂ ಇಬ್ಬರ ನಡುವೆ ಹೊಂದಾಣಿಕೆ ಸರಿಯಿಲ್ಲ ಎನ್ನುವ ಮಾತು ಪಕ್ಷದಲ್ಲಿ ಕೇಳಿಬಂದಿದ್ದವು. ಆದರೆ ಆ ಸಮಯದಲ್ಲಿ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ನಾಯಕತ್ವ ವಹಿಸಿದ್ದರಿಂದ ಚುನಾವಣೆಯಲ್ಲಿ ಯಶಸ್ಸು ಕಾಣುವಂತಾಗಿತ್ತು. ಜತೆಗೆ ಹದಿನೈದು ವರ್ಷದ ಬಳಿಕ ಮದ್ದೂರಿನಲ್ಲಿ ಕಾಂಗ್ರೆಸ್ ಬಾವುಟ ಹಾರುವಂತಾಗಿದೆ. ಇದಾದ ಬಳಿಕ ಮತ್ತೆ ಇಬ್ಬರು ನಾಯಕರ ನಡುವೆ ಕಂದಕ ಏರ್ಪಟಿದೆ ಎನ್ನುವುದು ಬಹಿರಂಗ ಗುಟ್ಟು.

ಅಸಮಾಧಾನಕ್ಕೆ ಕಾರಣವೇನು?: ಜಿಲ್ಲೆಯ ಏಳು ಕ್ಷೇತ್ರದ ಪೈಕಿ ಬೆಂಬಲಿತ ಸೇರಿದಂತೆ ಆರು ಕ್ಷೇತ್ರದಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ನಾಯಕರು, ಲೋಕಸಭಾ ಚುನಾವಣೆಯಲ್ಲಿಯೂ ಗೆಲುವಿನ ಓಟವನ್ನು ಮುಂದುವರೆಸುವ ಆತ್ಮವಿಶ್ವಾಸದಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಸಭೆಗಳು, ನಾಯಕರ ಅಭಿಪ್ರಾಯ ಸಂಗ್ರಹಗಳು ಗೌಪ್ಯವಾಗಿಯೇ ನಡೆಯುತ್ತಿವೆ.
ಈ ಎಲ್ಲದರ ನಡುವೆ ಮದ್ದೂರು ಕಾಂಗ್ರೆಸ್‌ನ ಮುಸುಕಿನ ಗುದ್ದಾಟ ಕೂಡ ಹೊರಗೆ ಬರುವಂತಹ ಬೆಳವಣಿಗೆ ನಡೆಯುತ್ತಿದೆ. ಆದರೆ ವಾಸ್ತವವಾಗಿ ಮಧು ಮಾದೇಗೌಡ ಹಾಗೂ ಕದಲೂರು ಉದಯ್ ನಡುವಿನ ಅಸಮಾಧಾನಕ್ಕೆ ಕಾರಣ ಏನೆಂಬುದಕ್ಕೆ ಸರಿಯಾದ ಸ್ಪಷ್ಟತೆ ಸಿಕ್ಕಿಲ್ಲ. ಆದಾಗ್ಯೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಡೆದ ಬೆಳವಣಿಗೆ ಎನ್ನುವುದು ಮೇಲ್ಕೋಟಕ್ಕೆ ಕಂಡುಬರುತ್ತಿದೆ. ವಾಸ್ತವವಾಗಿ ಇದಕ್ಕಿಂತ ಬೇರೆ ಬೆಳವಣಿಗೆಯೂ ನಡೆದಿದೆ ಎನ್ನುವ ಪಕ್ಷದ ಮೂಲಗಳು ತಿಳಿಸುತ್ತಿವೆ. ಈಗಾಗಲೇ ಹೇಳಿದಂತೆ ಒಂದೇ ಕ್ಷೇತ್ರದವರಾದರೂ ಇಬ್ಬರು ನಾಯಕರು ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಿಲ್ಲ.
ಒಟ್ಟಾರೆ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿರುವ ಹೊತ್ತಿನಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆಯಾಡಲಾರಂಭಿಸಿದ್ದು, ಮುಂದೆ ಯಾವ ತಿರುವು ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net