

ಮದ್ದೂರು : ಷೇರುದಾರರ ಮತ್ತು ಗ್ರಾಹಕರ ಸಹಕಾರದಿಂದ ಸಂಘ ಪ್ರಸ್ತುತ ವರ್ಷ 25 ಲಕ್ಷ ರೂ. ಗಳ ಲಾಭಗಳಿಸಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಮಹದೇವು ತಿಳಿಸಿದರು.
ಸಂಘದ ಆವರಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ ಹಣಕಾಸು ವರ್ಷಗಳಲ್ಲಿ ಸಂಘ ಮತ್ತಷ್ಟು ಆರ್ಥಿಕ ಅಭಿವೃದ್ಧಿ ಹೊಂದಿ ಷೇರುದಾರರ ಅನುಕೂಲಕ್ಕಾಗಿ ಹಲವು ಸೌಲಭ್ಯ ಕಲ್ಪಿಸಲಿದೆ ಎಂದರು. ಸಂಘದ ಅಭಿವೃದ್ಧಿಯೊಂದಿಗೆ ಆಸ್ತಿಗಳನ್ನು ಸಂರಕ್ಷಣೆ ಮಾಡುವ, ಅಗತ್ಯ ದಾಖಲಾತಿ ಸಂಗ್ರಹಿಸಿ ಸಂಘಕ್ಕೆ ಸಂಬಂಧಪಟ್ಟ ಆಸ್ತಿಗಳಿಗೆ ಯಾವುದೇ ತೊಡಕುಂಟಾಗದಂತೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಈಗಾಗಲೇ ಸಂಘದ ಆಸ್ತಿ ರಕ್ಷಣೆಯೊಂದಿಗೆ ತಂತಿ ಬೇಲಿ ಅಳವಡಿಕೆ ಮತ್ತು 7 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದೆ. 6 ತಿಂಗಳೊಳಗಾಗಿ ಕಾಮಗಾರಿ ಮುಗಿಸಿ ಗ್ರಾಹಕರ ಸೇವೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ಮುಂಬರುವ ದಿನಗಳಲ್ಲಿ ಆಡಳಿತ ಮಂಡಳಿ ಕೈಗೊಳ್ಳುವ ಎಲ್ಲಾ ಅಭಿವೃದ್ಧಿಗಳಿಗೆ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.