

ವಿಜಯವಾಣಿ ಸುದ್ದಿಜಾಲ ಮದ್ದೂರು
ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ತಿಳಿಸಿದರು.
ಪಟ್ಟಣದ ಗ್ಲೋಬಲ್ ಇಂಟರ್‌ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಮಂಡ್ಯದ ಸಕ್ಕರೆನಾಡು ಲಯನ್ಸ್ ಸಂಸ್ಥೆ
ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂದಲ್ಲಿ ಅವರು ಮಾತನಾಡಿದರು. ಅನೇಕ ಶಿಕ್ಷಕರು ಸಂಕಷ್ಟದ ನಡುವೆಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಜೀವನ ಮಟ್ಟ ಸುಧಾರಿಸಲು ಸರ್ಕಾರ ಹಲವು ಯೋಜನೆ ಜಾರಿಗೊಳಿಸಬೇಕಿದೆ ಎಂದರು.
ನಮಗೆ ವಿದ್ಯೆ, ಬುದ್ಧಿ, ಜ್ಞಾನದ ಭಂಡಾರವನ್ನು ಧಾರೆ ಎರೆದು ಬದುಕನ್ನು ಕಟ್ಟಿ ಕೊಡುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರತಿನಿತ್ಯ ನೆನೆದು ಗೌರವಿಸುವ ಕೆಲಸವಾಗಬೇಕೆಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಾಳೀರಯ್ಯ ಮಾತನಾಡಿ, ಶಿಕ್ಷಕರ ದಿನಾಚರಣೆ ಸಂದರ್ಭ ಸಾಧಕ ಶಿಕ್ಷಕರನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿಗಳನ್ನು ತಿದ್ದು, ತೀಡಿ ಸನ್ಮಾರ್ಗದತ್ತ ಸಾಗುವಂತೆ ಮಾಡಿ ಜ್ಞಾನ ಕೊಡುವ ಶಿಕ್ಷಕರ ಸೇವೆಗೆ ಬೆಲ ಕಟ್ಟಲಾಗದು ಎಂದರು.
ಸನ್ಮಾನ: ನಿವೃತ್ತಿ ಹೊಂದಿದ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಾದ ಟಿ.ರವಿಶಂಕರ್, ಬಿ.ವಿ.ಸುಧಾ, ಬಿ.ವಿ.ನಂಜಪ್ಪ, ಎ.ವಿ.ಪಾವನಾ, ಎಚ್.ಎನ್.ಲೋಕೇಶ್, ಜಿ.ಸಿ.ಶಿವಪ್ಪ, ಉಮೇಶ್‌ಕುಮಾರ್, ಜಿ.ಎಂ.ನಾಗಮಲ್ಲೇಶ್, ಗುರುಲಿಂಗಯ್ಯ ಹಾಗೂ ಹುಚ್ಚಯ್ಯ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಎಸ್.ಮೋಹನ್, ಶಾಲಾ ಸಮಿತಿ ಅಧ್ಯಕ್ಷ ಶಿವನಂಜಯ್ಯ, ಲಯನ್ಸ್ ಮಾಜಿ ಪ್ರಾಂತಪಾಲ ನಾಗರಾಜು, ಶಿಕ್ಷಕ ರವಿಶಂಕರ್ ಇತರರು ಹಾಜರಿದ್ದರು