ಮದ್ದೂರು, ಮಳವಳ್ಳಿಗಿಲ್ಲ ಸಮರ್ಪಕ ನೀರು: ನಾಲೆ ಪರಿಶೀಲಿಸಿದ ಶಾಸಕದ್ವಯರು

Maddur and Malavalli do not have adequate water Mandya
Published on

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾಗಿ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದೆ. ಆದರೆ ಇತ್ತ ಜಿಲ್ಲೆಯ ನಾಲೆಗಳಿಗೆ ನೀರು ಹರಿಸುತ್ತಿದ್ದರೂ ಮಳವಳ್ಳಿ ಮತ್ತು ಮದ್ದೂರು ತಾಲೂಕಿನ ಕೊನೆ ಭಾಗಕ್ಕೆ ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಕೆ.ಎಂ.ಉದಯ್ ನಾಲೆಗಳ ಪರಿಶೀಲನೆ ನಡೆಸಿದರು.

ಪಿ.ಎಂ.ನರೇಂದ್ರಸ್ವಾಮಿ ಹುಲಿಕೆರೆ ಟನಲ್ ಸೇರಿದಂತೆ ಹಲವೆಡೆ ನಾಲೆಗಳನ್ನು ವೀಕ್ಷಿಸಿದರು. ಬಳಿಕ ಹೆಬ್ಬಕವಾಡಿಗೆ ಬಂದಾಗ ಕೆ.ಎಂ.ಉದಯ್ ಜತೆಯಾದರು. ಮಾತ್ರವಲ್ಲದೆ ಕೊನೆ ಭಾಗಕ್ಕೆ ನೀರು ತಲುಪದಿರುವ ಬಗ್ಗೆ ಪರಿಶೀಲಿಸುವುದರ ಜತೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ ಇನ್ನು 10 ರಿಂದ 15 ದಿನ ಯಾವುದೇ ಅಡಚಣೆಯಾಗದಂತೆ ರೈತರಿಗೆ ನೀರು ಕೊಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಾಟಿಗೆ ಸಮರ್ಪಕ ನೀರು ಕೊಡಿ: ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ ತಾಲೂಕಿನಲ್ಲಿ ರೈತರು ನಾಟಿ ಕಾರ್ಯ ಮಾಡುತ್ತಿದ್ದ ಕಾರಣ ಮದ್ದೂರು, ಮಳವಳ್ಳಿ ತಾಲೂಕಿನ ಕೊನೇ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಯಲಿಲ್ಲ. ಈಗ ಶೇ.90ರಷ್ಟು ನಾಟಿ ಕಾರ್ಯ ಮುಗಿದಿದೆ. ಆದ್ದರಿಂದ ಮುಂದಿನ ಎರಡು ಮೂರು ವಾರ ಎರಡು ತಾಲೂಕಿನ ಕಡೇ ಭಾಗದ ಜಮೀನಿನಲ್ಲಿ ನೀರು ತಲುಪಿಸುವ ಕೆಲಸವನ್ನು ಅಧಿಕಾರಿಗಳು ಎಚ್ಚರಿಕೆ ವಹಿಸಿ ಮಾಡಬೇಕು ಎಂದು ತಾಕೀತು ಮಾಡಿದರು.

ಹೆಬ್ಬಕವಾಡಿ ನಾಲೆಯಲ್ಲಿ 440 ಕ್ಯೂಸೆಕ್, ತುರಗನೂರು ನಾಲೆಯಲ್ಲಿ 430 ಕ್ಯೂಸೆಕ್, ಕೆಸರಗುಂಡಿ ನಾಲೆಯಲ್ಲಿ 150 ಕ್ಯೂಸೆಕ್ ನೀರು ಹರಿಯುತ್ತಿದೆ. ಇದರಿಂದಾಗಿ ರೈತರಿಗೆ ಸಮರ್ಪಕವಾಗಿ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಮೂರು ತಾಲೂಕಿನಲ್ಲಿ ನಾಟಿ ಕೆಲಸ ಮುಗಿದಿರುವುದರಿಂದ ಮದ್ದೂರು, ಮಳವಳ್ಳಿಗೆ ಹೆಚ್ಚಿನ ನೀರು ಬರಲಿದೆ. ಇದರ ಜತೆಗೆ 100 ಕ್ಯೂಸೆಕ್ ನೀರನ್ನು ಹೆಚ್ಚಳ ಮಾಡಬೇಕು. ನಿಗಮದ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಅಂತೆಯೇ ಎರಡು ತಾಲೂಕಿನ ರೈತರು ಆತಂಕಪಡುವ ಅಗತ್ಯವಿಲ್ಲ. ಕೃಷಿಗೆ ಅಗತ್ಯತೆಗೆ ತಕ್ಕಂತೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗುವುದು. ಇನ್ನು ಎರಡು ತಿಂಗಳಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು. ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ವರುಣ ಕೃಪೆ ತೋರಿದರೆ ಸಹಾಯಕವಾಗಲಿದೆ ಎಂದರು.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಮುಖ್ಯ ಇಂಜಿನಿಯರ್ ವೆಂಕಟೇಶ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ಜಯಂತ್, ನಂಜುಂಡೇಗೌಡ, ವಾಸುದೇವ್, ಬಾಬುಕೃಷ್ಣದೇವ್, ಎಇಇ ಜಯರಾಂ, ಜೆಇ ಕೆಂಪರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net