

ಶಿವಮೊಗ್ಗ: ನಬಾರ್ಡ್‌ನಿಂದ 2024-25ನೇ ಸಾಲಿಗೆ ಎಂಎಡಿಬಿ(ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ) ವ್ಯಾಪ್ತಿಯ ಬೃಹತ್ ತೂಗುಸೇತುವೆಗಳು, ತೂಗು ಸೇತುವೆಗಳು ಹಾಗೂ ಕಾಲು ಸಂಕಗಳಿಗೆ 200 ಕೋಟಿ ರೂ. ಪರಿಷ್ಕೃತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಲು ಮಂಡಳಿ ನಿರ್ಧರಿಸಿತು.
ಸಾಗರ ರಸ್ತೆಯ ಎಂಎಡಿಬಿ ಕಚೇರಿಯಲ್ಲಿ ಶನಿವಾರ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ, 2022-23ನೇ ಸಾಲಿನಲ್ಲಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳಿಗೆ ಆರ್ಥಿಕ ನೆರವು ಪಡೆದು ಕಾಮಗಾರಿಗಳನ್ನು ಕಾರ್ಯಗತಗೊಳಿಸಲು ಯೋಜನೆ ರೂಪಿಸಲು ಬಜೆಟ್‌ನಲ್ಲಿ 100 ಕೋಟಿ ರೂ. ಅನುದಾನ ಹಂಚಿಕೆ ಮಾಡಲು ಸರ್ಕಾರಕ್ಕೆ ಕೋರಲಾಗಿತ್ತು. ಇದೀಗ ಅದನ್ನು 200 ಕೋಟಿ ರೂ.ಗೆ ಹೆಚ್ಚಿಸಲು ಮಂಡಳಿ ಅನುಮೋದಿಸಿತು.
ಸರ್ಕಾರದಿಂದ ಕಳೆದ ಆಯವ್ಯಯದಲ್ಲಿ ನಬಾರ್ಡ್ ಯೋಜನೆಯಡಿ ಅನುದಾನ ಹಂಚಿಕೆ ಮಾಡದೇ ಇರುವುದರಿಂದ 2024-25ನೇ ಸಾಲಿಗೆ ಬೃಹತ್ ತೂಗುಸೇತುವೆಗಳಿಗೆ 115.73 ಕೋಟಿ ರೂ., ತೂಗುಸೇತುವೆ ಹಾಗೂ ಕಾಲು ಸಂಕಗಳನ್ನು ನಿರ್ಮಿಸಲು ತಲಾ 40 ಕೋಟಿ ರೂ. ಆರ್ಥಿಕ ನೆರವು ಪಡೆಯಲು ಪರಿಷ್ಕೃತ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಮಂಡಳಿಯ ಪ್ರಭಾರ ಕಾರ್ಯದರ್ಶಿ ಸಿ.ಎಸ್.ಗಾಯತ್ರಿ ಅವರು ಸಭೆಗೆ ಮಂಡಿಸಿದರು. ಇದಕ್ಕೆ ಸಭೆಯಲ್ಲಿದ್ದ ಎಲ್ಲ ಶಾಸಕರು, ಎಂಎಲ್‌ಸಿಗಳು ಸರ್ವಾನುಮತದಿಂದ ಅಂಗೀಕರಿಸಿದರು.
ಬಳಿಕ ಮಾತನಾಡಿದ ಮಂಡಳಿ ಅಧ್ಯಕ್ಷ ಮಂಜುನಾಥಗೌಡ, ನಬಾರ್ಡ್ ಪರಿಷ್ಕೃತ ಪ್ರಸ್ತಾವನೆಯಂತೆ ಹಣ ಕೊಡಲು ಸಿದ್ಧವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಚರ್ಚಿಸಿದ್ದಾರೆ. 20 ವರ್ಷಗಳ ಅವಧಿಗೆ ನಬಾರ್ಡ್ ಸಾಲ ನೀಡಲಿದ್ದು ಬಡ್ಡಿ ಸಹಿತವಾಗಿ ಸರ್ಕಾರ ನಬಾರ್ಡ್‌ಗೆ ಮರುಪಾವತಿ ಮಾಡಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎಂಎಲ್‌ಸಿ ಮಂಜುನಾಥ ಭಂಡಾರಿ, ಬೃಹತ್ ತೂಗುಸೇತುವೆಗಳು ಎಂದಷ್ಟೇ ಹೇಳಲಾಗಿದೆ. ಅವುಗಳ ಸ್ವರೂಪ, ಉದ್ದ, ಅಗಲ ಎಷ್ಟಿರಬೇಕು ?, ಒಂದೊಂದಕ್ಕೂ ಎಷ್ಟು ಬಜೆಟ್ ಬೇಕು ?ಎಂಬ ನಿಖರ ಮಾಹಿತಿ ಇಲ್ಲ. ಮೀಸಲಿರುವ ಅನುದಾನ ಬೃಹತ್ ತೂಗು ಸೇತುವೆಗಳಿಗೆ ಸಾಕಾಗಲಿದೆ ಎಂಬ ಅನುಮಾನಗಳೂ ಇವೆ ಎಂದರು. ಅದಕ್ಕೆ ಶಾಸಕ ಭೀಮಣ್ಣ ನಾಯ್ಕ ಧ್ವನಿಗೂಡಿಸಿದರು. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ಕಾರ್ಯದರ್ಶಿ ಸಿ.ಎಸ್.ಗಾಯತ್ರಿ ಉಪಸ್ಥಿತರಿದ್ದರು.