

ತಾಳಗುಪ್ಪ: ನಾಗರ ಪಂಚಮಿಯ ಮಾರನೇ ದಿವಸ ಬೆಳಗ್ಗೆ ಮಲೆನಾಡಿನ ಮನೆಗಳಲ್ಲಿ ಎಲ್ಲರದ್ದೂ ಒಂದೇ ಮಾತು ನಿನ್ನ ಕೈಬಣ್ಣ ಕೆಂಪಾಗಿದೆಯಾ? ನಿನ್ನ ಕೈಬಣ್ಣ ಕೆಂಪಾಗಿದೆಯಾ?
ಹೌದು. ನಾಗರ ಪಂಚಮಿ ಸಂದರ್ಭದಲ್ಲಿ ಆಚರಿಸುವ ಮದರಂಗಿ ಸಂಪ್ರದಾಯ ಅಲ್ಲಲ್ಲಿ ಮಾತ್ರ ಕಂಡು ಬರುತ್ತಿದೆ.
ನಾಗರಪಂಚಮಿ ದಿವಸ ಅಥವಾ ಮಾರನೇ ದಿವಸ ಮದರಂಗಿ ಸೊಪ್ಪನ್ನು ಕೊಯ್ದು, ಅದಕ್ಕೆ ಹುಳಿ ಹಾಕಿ ಒರಳಿನಲ್ಲಿ ಹದವಾಗಿ ಬೀಸುತ್ತಾರೆ. ಆನಂತರ ಕುಲ್ಡಂಗಿ ಎಂಬ ಗಿಡದ ಎಲೆಗಳನ್ನು ಕೊಯ್ದು ಉಗುರಿನ ಮೇಲೆ ಮದರಂಗಿ ಚಟ್ನಿ ಇಟ್ಟು ಬಾಳೆಪಟ್ಟೆ ದಾರದಿಂದ ಬೆರಳಿನ ಸುತ್ತ ಕಟ್ಟುತ್ತಾರೆ.
ರಾತ್ರಿ ಕಳೆದು ಬೆಳಗ್ಗೆ ಬೆರಳಿಗೆ ಕಟ್ಟಿದ ಕಟ್ಟು ಬಿಚ್ಚಿದಾಗ ಉಗುರು ಬೆರಳು ಸಮೇತ ಕೆಂಪಗಾಗಿರುತ್ತದೆ. ಕೆಲವೊಮ್ನೆ ಚಟ್ನಿ ಹದ ವ್ಯತ್ಯಾಸವಾದಾಗ ಕೆಂಪು ಬಣ್ಣ ಬಾರದಿರುವುದು ಅಥವಾ ಕಪ್ಪಾಗಿಬಿಡುವುದು ಇದೆ. ಆಗ ಚಟ್ನಿ ರುಬ್ಬಿದವರನ್ನು ಮನೆಯವರೆಲ್ಲ ಸೇರಿ ರುಬ್ಬುತ್ತಾರೆ. ಸಾಮಾನ್ಯವಾಗಿ ಮನೆಮಂದಿಯೆಲ್ಲ ಈ ರಂಗಿಗೆ ಕೈವೊಡ್ಡುವುದು ಹಿಂದೆ ಸಾಮಾನ್ಯವಾಗಿತ್ತು. ಗಂಡಸರು ಸಹ ಒಂದೆರಡು ಬೆರಳಿಗಾದರೂ ಕಡ್ಡಾಯವಾಗಿ ಮದರಂಗಿ ಹಚ್ಚಿಕೊಳ್ಳುತ್ತಿದ್ದರು. ಹೆಂಗಸರು ಕಾಲಿನ ಬೆರಳಿಗೂ ಹಚ್ಚಿಕೊಂಡು ಸಂಭ್ರಮಿಸುತ್ತಿದ್ದರು.
ಈ ಬಣ್ಣ ತಿಂಗಳು ತನಕ ಇರುತ್ತಿತ್ತು. ಯಾವುದೇ ರಾಸಾಯನಿಕ ಲೇಪವಿಲ್ಲದ ಈ ಬಣ್ಣ ಮಾಡುವುದು ಕಷ್ಟ ಎನ್ನುವ ವಿಚಾರ ಹೊರತುಪಡಿಸಿದರೆ ಆರೋಗ್ಯಪೂರ್ಣ ಎನ್ನುವುದು ಸತ್ಯ. ಈ ಕಾಲದಲ್ಲಿ ಮದರಂಗಿ ಗಿಡ ನೆಟ್ಟು ಅದರ ಸೊಪ್ಪು ಕೊಯ್ದು ಚಟ್ನಿ ಮಾಡುವ ಅಮ್ಮಂದಿರು ಇಲ್ಲದ ಕಾರಣ ಅಂಗಡಿಯ ಕೋನ್‌ಗಳು ಆ ಜಾಗವನ್ನು ಆವರಿಸಿವೆ. ಆದರೂ ಅಲ್ಲೊಂದು ಇಲ್ಲೊಂದು ಕಡೆ ಈ ಸಂಪ್ರದಾಯ ಮುಂದುವರಿದಿದೆ.
ಈ ಪದ್ಧತಿ ಅಲಂಕಾರಕ್ಕಾಗಿ ಮಾತ್ರವೇ ಅಲ್ಲ, ಇದರಲ್ಲಿ ಆರೋಗ್ಯದ ಸೂತ್ರವೂ ಅಡಗಿದೆ. ಮದರಂಗಿ ಸೊಪ್ಪು ಮೂಲತಃ ನಂಜು ನಿವಾರಕ ಗುಣ ಹೊಂದಿದೆ. ಇದು ಕೈ ಬೆರಳುಗಳ ಮೂಲಕ ಸಣ್ಣ ಪ್ರಮಾಣದಲ್ಲಿ ಹೊಟ್ಟೆ ಸೇರಬೇಕು ಎನ್ನುವುದು ಆಶಯ. ಮಲೆನಾಡಿಗರು ಅದನ್ನ ನೇರವಾಗಿ ದೋಷ ಪರಿಹಾರಕ್ಕೆ ಮದರಂಗಿ ಹಚ್ಚಿಕೊಳ್ಳಬೇಕು ಎಂಬ ಸಂಪ್ರದಾಯ ಮಾಡಿದ್ದಾರೆ.ಸತೀಶ್ ಇಟಗಿ