ಎಫ್‌ಎಂಸಿ ಅಂಗನವಾಡಿ ಕೇಂದ್ರ ಅತಂತ್ರ

13mdks5 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಅನ್ಬುಕುಮಾರ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಪ್ರಾರಂಭಿಸಿದ ಜಂಬೂರು ಅಂಗನವಾಡಿ ಕೇಂದ್ರ ತೆರೆಯುವ ಮುನ್ನವೇ ಮುಚ್ಚಿದೆ.

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಜಂಬೂರು ಬಾಣೆಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬಡಾವಣೆಯಲ್ಲಿರುವ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರ ತೆರೆಯಲಾಗಿತ್ತು. ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಾರ್ಕೊಲ್ಲಿ ಮಿನಿ ಅಂಗನವಾಡಿ ಕೇಂದ್ರ ವನ್ನು ಜಂಬೂರಿಗೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದ ಹಿನ್ನೆಲೆಯಲ್ಲಿ ಜಂಬೂರು ಅಂಗನವಾಡಿ ಕೇಂದ್ರ ತೆರೆಯಲು ಅಡ್ಡಿಯಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ೩೮೪ ಕುಟುಂಬ ನೆಲೆಸಿರುವ ಬಡಾವಣೆಯಲ್ಲಿ ಇನ್ನೂ ಅಂಗನವಾಡಿ ಕೇಂದ್ರ ತೆರೆದಿಲ್ಲವೇ ಎಂದು ಅಧಿಕಾರಿಗಳನ್ನು ಉಸ್ತುವಾರಿ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡಿದ್ದರು. ಜಿಲ್ಲಾಧಿಕಾರಿ ಸೂಚನೆಯನ್ವಯ ಸಭೆ ನಡೆದ ದಿನವೇ ಎಫ್‌ಎಂಸಿ ಬಡಾವಣೆಯಲ್ಲಿ ೬೨ನೇ ಮನೆಯನ್ನು ಅಂಗನವಾಡಿ ಕೇಂದ್ರವನ್ನಾಗಿ ಪರಿವರ್ತಿಸ ಲಾಗಿತ್ತು. ಅದಕ್ಕ್ಕೂ ಮುನ್ನ ಈ ಮನೆ ಮಾದಾಪುರ ಗ್ರಾಮ ಲೆಕ್ಕಾಧಿಕಾರಿ ಕಚೇರಿಯಾಗಿತ್ತು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಸೂಚನೆಯನ್ವಯ ಎಫ್‌ಎಂಸಿ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಜಾರ್ಕೊಲ್ಲಿ ಮಿನಿ ಅಂಗನವಾಡಿ ಸ್ಥಳಾಂತರಕ್ಕೆ ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದರು. ಈ ಹಿನ್ನೆಲೆಯಲ್ಲಿ ಎಫ್‌ಎಂಸಿ ಅಂಗನವಾಡಿ ಕೇಂದ್ರ ಕಾರ್ಯಾರಂಭ ಮಾಡಲು ಸಾಧ್ಯವಾಗಿಲ್ಲ ಎಂದು ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ ವಿಜಯವಾಣಿಗೆ ತಿಳಿಸಿದ್ದಾರೆ.

ಎಫ್‌ಎಂಸಿ ಬಡಾವಣೆಯಲ್ಲಿ ಹೊಸದಾಗಿ ಅಂಗನವಾಡಿ ಕೇಂದ್ರ ತೆರೆಯಲು ಬೆಂಗಳೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸ ಅಂಗನವಾಡಿ ಕೇಂದ್ರಕ್ಕೆ ಮಂಜೂರಾತಿ ಸಿಗುವವರೆಗೂ ತಾತ್ಕಾಲಿಕವಾಗಿ ಕೇಂದ್ರ ನಡೆಸುವ ಬಗ್ಗೆ ಮಡಿಕೇರಿ ಶಾಸಕರೊಂದಿಗೆ ಚರ್ಚಿಸಲಾಗಿದೆ. ಅಧಿವೇಶನ ದಲ್ಲಿರುವ ಶಾಸಕರು ಮರಳಿದ ಬಳಿಕ ತಾತ್ಕಾಲಿಕವಾಗಿ ಅಂಗನವಾಡಿ ಕೇಂದ್ರ ಪ್ರಾರಂಭಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ.

ಎಫ್‌ಎಂಸಿ ಬಡಾವಣೆಯಲ್ಲಿ ೩ ರಿಂದ ೬ ವರ್ಷ ಪ್ರಾಯದ ೧೨ ಮಕ್ಕಳು ಇದ್ದಾರೆ. ಕೆಲವು ಮಕ್ಕಳು ಜಾರ್ಕೊಲ್ಲಿ ಅಂಗನವಾಡಿ, ಕೆಲವು ಮಕ್ಕಳು ಇಗ್ಗೋಡ್ಲು ಅಂಗನವಾಡಿ ತೆರಳುತ್ತಿದ್ದಾರೆ. ೨ ಕಿಲೋಮೀಟರ್ ದೂರದಲ್ಲಿರುವ ಅಂಗನವಾಡಿಗೆ ಮಕ್ಕಳನ್ನು ಕಳುಹಿಸುವುದು ಕಷ್ಟ ಎಂದು ಕೆಲವರು ಮಕ್ಕಳನ್ನು ಕಳುಹಿಸುತ್ತಿಲ್ಲ. ಆದರೆ, ಸರ್ಕಾರದಿಂದ ಸಿಗುವ ಆಹಾರವನ್ನು ಮಕ್ಕಳ ಮನೆಗೆ ತಲುಪಿಸಲಾಗುತ್ತಿದೆ ಎಂದು ಸಿಡಿಪಿಒ ತಿಳಿಸಿದ್ದಾರೆ.

ಭಾನುವಾರ ಎಫ್‌ಎಂಸಿ ಅಂಗನವಾಡಿ ಕೇಂದ್ರವನ್ನು ಸ್ವಚ್ಛಗೊಳಿಸಲಾಗಿತ್ತು. ಸೋಮವಾರ ಅಗತ್ಯ ಸಾಮಗ್ರಿ ತರಿಸಲಾಗಿತ್ತು. ಆದರೆ, ಮಂಗಳವಾರ ಎಲ್ಲವನ್ನು ಸ್ಥಳಾಂತರಿಸಿದ್ದಾರೆ. ಎಫ್‌ಎಂಸಿ ಬಡಾವಣೆಯಲ್ಲಿರುವ ಮಕ್ಕಳಿಗೆ ದೂರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಹೋಗುವುದು ಕಷ್ಟವಾಗುತ್ತದೆ ಎಂದು ಪಾಲಕರಾದ ಮೇದೂರ ಕಂಠಿ ನಾಣಿಯಪ್ಪ ಹೇಳಿದ್ದಾರೆ.

ಎಫ್‌ಎಂಸಿ ಬಡಾವಣೆಯ ಅಂಗನವಾಡಿ ಮಂಗಳವಾರದಿಂದ ತೆರೆಯುತ್ತದೆ ಎಂದು ೮ ಮಕ್ಕಳನ್ನು ಕೇಂದ್ರಕ್ಕೆ ಪಾಲಕರು ಕರೆದುಕೊಂಡು ಬಂದಿದ್ದರು. ಬಾಗಿಲು ಹಾಕಿದ್ದ ಅಂಗನವಾಡಿ ಕೇಂದ್ರ ನೋಡಿ ಪಾಲಕರು ಅಚ್ಚರಿಗೆ ಒಳಗಾದರು. ಮೂರು ವರ್ಷದಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಬಡಾವಣೆಯಲ್ಲಿ ಜನ ವಾಸಿಸುತ್ತಿದ್ದಾರೆ. ಇನ್ನೂ ಇಲ್ಲಿ ಅಂಗನವಾಡಿ ಕೇಂದ್ರ ಪ್ರಾರಂಭಿಸಿಲ್ಲ ಎಂದು ಮಹಿಳೆಯರು ಅಸಮಾಧಾನ ವ್ಯಕ್ತ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net