ಮಾದಪ್ಪನಿಗೆ ಎಳ್ಳಮಾವಾಸ್ಯೆ ವಿಶೇಷ ಪೂಜೆ

30 HANUR 4
Published on

 ಸನ್ನಿಧಿಯಲ್ಲಿ ರುದ್ರಾಭಿಷೇಕ, ಶತನಾಮ ಬಿಲ್ವಾರ್ಚನೆ- ನವರತ್ನ ಕೀರಿಟಧಾರಣೆ

ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸೋಮವಾರ ಎಳ್ಳಮಾವಾಸ್ಯೆ ಅಂಗವಾಗಿ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯ ಸಂಪನ್ನಗೊಂಡವು. ಆಗಮಿಸಿದ ನೂರಾರು ಭಕ್ತರು ದೇವರ ದರ್ಶನ ಪಡೆದು ಧನ್ಯತೆ ಮೆರೆದರು.

ಅಮಾವಾಸ್ಯೆಯ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ವಿವಿಧ ಬಣ್ಣದ ವಿದ್ಯುತ್ ದೀಪಗಳಿಂದ ಸನ್ನಿಧಿಯ ಆವರಣ ಕಂಗೊಳಿಸುತ್ತಿತ್ತು. ಸೋಮವಾರ ಬೆಳಗಿನ ಜಾವ 3.30ರಿಂದ 6.30 ರವರೆಗೆ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆಯನ್ನು ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಸ್ವಾಮಿಗೆ ಅಮಾವಾಸ್ಯೆ ಪೂಜೆ ನೆರವೇರಿಸಿ ದರು.ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಭಾನುವಾರವೇ ಆಗಮಿಸಿ ಬೀಡು ಬಿಟ್ಟಿದ್ದ ಭಕ್ತರು ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದರು. ಹರಕೆ ಹೊತ್ತವರು ಇಷ್ಟಾರ್ಥ ಉತ್ಸಾವಾದಿ ಸೇವೆಗಳನ್ನು ನೆರವೇರಿಸಿದರು.

ಹಣ್ಣು ,ಕಾಯಿ ಸಮರ್ಪಣೆ: ಸಾಲಿನಲ್ಲಿ ತೆರಳಿದ ಭಕ್ತರು ದೇವರಿಗೆ ಹಣ್ಣು ,ಕಾಯಿ ನೀಡಿ ಪೂಜೆ ಸಮರ್ಪಿಸಿದರು. ಕೆಲವರು 500 ರೂ. ಟಿಕೆಟ್ ಪಡೆದು ವಿಶೇಷ ಕೌಂಟರ್ ಮೂಲಕ ತೆರಳಿ ದರ್ಶನ ಪಡೆದರು. ಚಾಮರಾಜನಗರ ಸೇರಿದಂತೆ ಮೈಸೂರು, ಬೆಂಗಳೂರು, ಬಿಡದಿ, ರಾಮನಗರ, ಕನಕಪುರ, ಚನ್ನಪಟ್ಟಣ, ಮದ್ದೂರು ಹಾಗೂ ಮಂಡ್ಯದಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು. ಶಕ್ತಿ ಯೋಜನೆ ಪರಿಣಾಮ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕುಡಿಯುವ ನೀರು, ದಾಸೋಹ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹಾಗೂ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net