

ಮಡಿಕೇರಿ:
ಕುಶಾಲನಗರ ತಾಲೂಕು ಮಾದಾಪಟ್ಟಣ ಗ್ರಾಮಕ್ಕೆ ಕೊನೆಗೂ ಸ್ಮಶಾನದ ಜಾಗ ಸಿಕ್ಕಿದೆ. ಈ ವ್ಯಾಪ್ತಿಯ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಗುಡ್ಡೆಹೊಸೂರು ಗ್ರಾ.ಪಂ. ಕಂದಾಯ, ಸರ್ವೆ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸ್ಥಳ ಗುರುತಿಸಿ, ಸಮತಟ್ಟು ಮಾಡಿ, ಬೇಲಿ ಹಾಕಿ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಲಾಗಿದೆ.
ಮಾದಾಪಟ್ಟಣ ಗ್ರಾಮದ ಸ.ನಂ ೬/೧ ರ ೦.೫೦ ಎಕ್ರೆ ಜಮೀನನ್ನು ಸಾರ್ವಜನಿಕ ಸ್ಮಶಾನದ ಉದ್ದೇಶಕ್ಕೆ ಕಾಯ್ದಿರಿಸುವ ಬಗ್ಗೆ ಕುಶಾಲನಗರ ತಾಲೂಕು ತಹಸೀಲ್ದಾರ್ ಅವರು ಸಂಬಂಧಪಟ್ಟ ಕಂದಾಯ ಪರಿವೀಕ್ಷಕರಿಂದ ವರದಿ ಪಡೆದು, ಸರ್ವೆಯಿಂದ ಗುರುತಿಸಿದ ಜಾಗವನ್ನು ಸ್ಥಳ ತನಿಖೆ ನಡೆಸಿ ಪ್ರಸ್ತಾಪಿತ ಜಾಗದಲ್ಲಿ ಯಾವುದೇ ಬೆಲೆಬಾಳುವ ಮರಗಳಿಲ್ಲ, ಜಮೀನಿಗೆ ರಸ್ತೆ ಸಂಪರ್ಕ ಇರುತ್ತದೆ, ಈ ಜಮೀನು ಕಾಯ್ದಿರಿಸುವ ಬಗ್ಗೆ ಗ್ರಾಮಸ್ಥರ ತಂಟೆ ತಕರಾರು ಇರುವುದಿಲ್ಲ ಎಂದು ಸ್ಥಳ ತನಿಖೆ ವರದಿಯೊಂದಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮಡಿಕೇರಿ ಉಪವಿಭಾಗದ ಸಹಾಯಕ ಆಯುಕ್ತರು ಮಾದಾಪಟ್ಟಣ ಗ್ರಾಮದ ಸ.ನಂ ೬/೧ ರಲ್ಲಿ ೦.೫೦ ಎಕ್ರೆ ಸರ್ವೆಯಿಂದ ಗುರುತಿಸಿದ ಜಾಗವನ್ನು ಸಾರ್ವಜನಿಕ ಸ್ಮಶಾನ ಉದ್ದೇಶಕ್ಕೆ ಕಾಯ್ದಿರಿಸಲು ಶಿಫಾರಸ್ಸು ಮಾಡಿದ್ದರು. ನಂತರ ಜಿಲ್ಲಾಧಿಕಾರಿ ಮಂಜೂರಾತಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸೂಕ್ತ ಬಂದೋಬಸ್ತ್ತ್‌ನೊಂದಿಗೆ ಶನಿವಾರ ಕಂದಾಯ ಇಲಾಖೆ, ಸರ್ವೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಜಂಟಿಯಾಗಿ ಸ್ಥಳ ಪರಿಶೀಲಿಸಿ ಒತ್ತುವರಿಯನ್ನು ತೆರವುಗೊಳಿಸಿ ಸ್ಮಶಾನ ಜಾಗದ ಹದ್ದುಬಸ್ತು ಮಾಡಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಮುರುಳೀಧರನ್, ಉಪಾಧ್ಯಕ್ಷ ಮಾದಪ್ಪ, ವಾರ್ಡ್ ಸದಸ್ಯರಾದ ಶಿವಪ್ಪ, ಪ್ರವೀಣ್, ಸರ್ವಮಂಗಳ, ಗಂಗಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ ಎಂ. ಆರ್., ಪಂಚಾಯಿತಿಯ ಇತರ ಸದಸ್ಯರು ಸಿಬ್ಬಂದಿ ವರ್ಗ ಈ ವೇಳೆ ಇದ್ದರು.
ತಾಲೂಕು ಸರ್ವೇಯರ್ ವೆಂಕಟೇಶ್, ಕಂದಾಯ ನಿರೀಕ್ಷಕ ಸಂತೋಷ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಗೌತಮ್ ಜಾಗ ಗುರುತಿಸಿ ಹಸ್ತಾಂತರ ಮಾಡಿದರು. ಗುರುತಿಸಲ್ಪಟ್ಟ ಜಾಗವನ್ನು ಆ ಕ್ಷಣವೇ ಸಮತಟ್ಟುಗೊಳಿಸಿ ಆವರಣದ ಸುತ್ತ ಕಂಬ ನೆಟ್ಟು ಬೇಲಿ ಅಳವಡಿಸುವಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯವರ ಸಮರೋಪಾದಿಯ ಕೆಲಸ ಗ್ರಾಮಸ್ಥರ ಮೆಚ್ಚುಗೆ ಗಳಿಸಿತು.