

ಅನ್ಸಾರ್ ಇನೋಳಿ ಉಳ್ಳಾಲ
ನಿರಂತರ ಜಾಗೃತಿ, ಹೆಚ್ಚಿನ ಗ್ರಾಮಗಳಲ್ಲಿ ಮನೆ-ಮನೆ ಕಸ ಸಂಗ್ರಹ ನಡೆಯುತ್ತಿರುವುದರ ಫಲವಾಗಿ ಉಳ್ಳಾಲ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಬದಿ ತ್ಯಾಜ್ಯ ನಿಯಂತ್ರಣಕ್ಕೆ ಬರುತ್ತಿದೆ. ಈ ನಡುವೆ ಕೆಲವು ಭಾಗಗಳಲ್ಲಿ ರಸ್ತೆಬದಿ ತ್ಯಾಜ್ಯ ಎಸೆಯುವ ಅನಾಗರಿಕ ವರ್ತನೆ ಮುಂದುವರಿದಿದ್ದು, ಸ್ಥಳೀಯಾಡಳಿತದ ಅಸಹಾಯಕತೆಗೆ ಸಾಕ್ಷಿಯಾಗಿದೆ.
ಕುತ್ತಾರ್, ಮದನಿನಗರ, ದೇರಳಕಟ್ಟೆ, ನಾಟೆಕಲ್ ಮೊದಲಾದ ಪರಿಸರ ಹಿಂದೆ ತ್ಯಾಜ್ಯಗುಡ್ಡೆಯಿಂದಾಗಿ ಅಕ್ಷರಶಃ ಡಂಪಿಂಗ್ ಯಾರ್ಡ್ ಆಗಿತ್ತು. 2016ರ ಅಂತ್ಯಕ್ಕೆ ಜನಶಿಕ್ಷಣ ಟ್ರಸ್ಟ್ ವತಿಯಿಂದ ನಡೆದ ಕಸದೊಂದಿಗೆ ಸಂವಾದ ನಿರೀಕ್ಷೆಗೂ ಮೀರಿದ ಪರಿಣಾಮ ಬೀರಿತ್ತು. ನಂತರದ ದಿನಗಳಲ್ಲಿ ಕಸದ ಗುಡ್ಡ ಇದ್ದ ಜಾಗದಲ್ಲಿ ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿದ್ದವು. ನಂತರದ ದಿನಗಳಲ್ಲಿ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಮನೆಗಳಿಂದ ಕಸ ಸಂಗ್ರಹ ಆರಂಭಗೊಂಡಿದ್ದಲ್ಲದೆ, ಇಂದಿಗೂ ಜನಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇದಾದ ಬಳಿಕ ರಸ್ತೆ ಅಗಲೀಕರಣ ಕಾಮಗಾರಿ ನಡೆದು ಪೆಟ್ಟಿಗೆ ಅಂಗಡಿಗಳಿಗೆ ಗೇಟ್ಪಾಸ್ ನೀಡಲಾಗಿತ್ತು. ಪ್ರಸ್ತುತ ನಾಟೆಕಲ್, ಕುತ್ತಾರ್, ದೇರಳಕಟ್ಟೆ ಪರಿಸರದಲ್ಲಿ ತ್ಯಾಜ್ಯ ಎಸೆತಕ್ಕೆ ಕಡಿವಾಣ ಬಿದ್ದಿದೆ.
ಮದನಿನಗರದಲ್ಲಿ ತ್ಯಾಜ್ಯಗುಡ್ಡ: ಕುತ್ತಾರ್ ಸಮೀಪದ ಮದನಿನಗರದ ರಸ್ತೆಬದಿ ತ್ಯಾಜ್ಯಗುಡ್ಡ ಎದ್ದು ನಿಂತಿದ್ದು ಮಿನಿ ಡಂಪಿಂಗ್ ಯಾರ್ಡ್ ಆಗಿ ಮಾರ್ಪಡುತ್ತಿದೆ. ಸನಿಹದಲ್ಲೇ ನಾಲ್ಕು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿದ್ದು ಇಲ್ಲಿರುವ ಡಂಪಿಂಗ್ ಯಾರ್ಡ್ ಅನಾರೋಗ್ಯಕರ ವಾತಾವರಣ ಸೃಷ್ಟಿಸಿರುವ ಜತೆ ಘನತೆಗೂ ಕುತ್ತು ತಂದಿದೆ.
ಈ ಪ್ರದೇಶ ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ ಎಂದು ಸೋಮೇಶ್ವರ ಪುರಸಭೆಯ ಅಧಿಕಾರಿ ಮತ್ತು ಜನಪ್ರತಿನಿಧಿಗಳು ತಿಳಿಸಿದ್ದಾರೆ. ಇದನ್ನು ನಿರಾಕರಿಸಿರುವ ಮುನ್ನೂರು ಪಿಡಿಒ, ಪ್ರಸ್ತುತ ಪ್ರದೇಶ ಸೋಮೇಶ್ವರ ಪುರಸಭಾ ವ್ಯಾಪ್ತಿಗೆ ಒಳಪಟ್ಟಿದೆ ಎಂದು ತಿಳಿಸಿದ್ದಾರೆ. ಎರಡು ಸ್ಥಳೀಯಾಡಳಿತಗಳ ಗೊಂದಲದಿಂದಾಗಿ ಇಲ್ಲಿ ಶಾಶ್ವತ ಡಂಪಿಂಗ್ ಯಾರ್ಡ್ ಆಗುವ ಆತಂಕ ಎದುರಾಗಿದೆ.
ಘಟಕದ ಎದುರಲ್ಲೇ ತ್ಯಾಜ್ಯರಾಶಿ!: ಮುನ್ನೂರು ಗ್ರಾಮ ಪಂಚಾಯಿತಿ ಘನತ್ಯಾಜ್ಯ ನಿರ್ವಹಣಾ ಘಟಕ ಉಳ್ಳಾಲ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣಗೊಂಡ ಪ್ರಥಮ ಘಟಕ. ಆದರೆ ನಿರ್ವಹಣೆ ಸಾಧ್ಯವಾಗದ ಕಾರಣ ಪಂಚಾಯಿತಿ ಖಾಸಗಿಗೆ ನೀಡಿದೆ. ಇದರಿಂದಾಗಿ ಘಟಕ ನಿರ್ಲಕ್ಷೃಕ್ಕೆ ಒಳಗಾಗಿದ್ದು ಘಟಕ ಪ್ರವೇಶಿಸುವ ಗೇಟ್ ಬಳಿಯೇ ತ್ಯಾಜ್ಯ ರಾಶಿ ಹಾಕಲಾಗಿದೆ.
ಈ ಘಟಕದ ಮೇಲ್ಭಾಗದ ಗುಡ್ಡ ಕುಸಿದಿದ್ದು ಘಟಕ ತೆರವುಗೊಳಿಸದಿದ್ದರೆ ಅಪಾಯ ಎದುರಾಗುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಒಂದು ಎಕರೆ ಮೀಸಲು ಜಮೀನಿನಲ್ಲಿ ನೂತನ ಘಟಕ ನಿರ್ಮಿಸಲು ಗ್ರಾ.ಪಂ. ಯೋಚಿಸಿದೆ. ಸದ್ಯ ತ್ಯಾಜ್ಯ ತಡೆಗೆ ರಾತ್ರಿ ಕಾವಲು ಪಡೆ ರಚಿಸುವ ಯೋಚನೆಯೂ ಇದೆ.
ಫಲ ನೀಡಿದ ಹಿಡಿಶಾಪದ ಬ್ಯಾನರ್!
ಪಂಚಾಯಿತಿಗಳು ಎಚ್ಚರಿಕೆ ಫಲಕ, ಸಿಸಿ ಕ್ಯಾಮರಾ ಅಳವಡಿಸಿದರೂ ತ್ಯಾಜ್ಯ ಎಸೆಯುವವರನ್ನು ಕಟ್ಟಿಹಾಕುವುದು ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಬೇಸತ್ತ ಜನರು ತ್ಯಾಜ್ಯ ಬೀಳುವ ಕೆಲವೆಡೆ ದೈವ-ದೇವರ ಮೊರೆ ಹೋದರೆ, ಕೆಲವೆಡೆ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸಿ ಹಿಡಿಶಾಪ ಹಾಕಿದ್ದಾರೆ. ಮುನ್ನೂರು ಘನತ್ಯಾಜ್ಯ ಘಟಕದ ಎದುರಲ್ಲೂ ತ್ಯಾಜ್ಯ ಎಸೆಯುವವರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶ್ರದ್ಧಾಂಜಲಿ ಬ್ಯಾನರ್ ಹಾಕಿ, ಈ ಕಸದಂತೆಯೇ ನಿಮ್ಮ ಜೀವನವೂ ಆದಷ್ಟು ಬೇಗನೇ ಕೊಳೆತು ಹೋಗಲಿ ಎಂದು ಪೌರಕಾರ್ಮಿಕರ ಹೆಸರಲ್ಲಿ ಬ್ಯಾನರ್ ಅಳವಡಿಸಿ ಹಿಡಿಶಾಪ ಹಾಕಲಾಗಿದೆ. ಈ ಬ್ಯಾನರ್ ಒಂದಷ್ಟು ಪರಿಣಾಮ ಬೀರಿದರೂ ಆಸುಪಾಸಿನಲ್ಲಿ ತ್ಯಾಜ್ಯ ಕಂಡು ಬರುತ್ತಿದೆ.
ಒಂದು ಎಕರೆ ಜಾಗ ಗುರುತಿಸಲಾಗಿದ್ದು ವಾರದ ಹಿಂದೆ ಸರ್ವೇಯರ್ ಗಡಿ ಗುರುತು ಮಾಡಿದ್ದಾರೆ. ಮಳೆ ಕಡಿಮೆಯಾದ ಬಳಿಕ ಹೊಸ ಘಟಕದ ಕೆಲಸ ಆರಂಭಿಸಲಾಗುವುದು. ಈಗಿರುವ ಘಟಕದ ಬಳಿ ತ್ಯಾಜ್ಯ ಎಸೆಯುವವರಿಗೆ ಕಡಿವಾಣ ಹಾಕಲು ರಾತ್ರಿ ಕಾವಲು ಕಾಯಲು ಯೋಚಿಸಲಾಗಿದೆ. ಶ್ರೀಕಾಂತ್ ಸಿಂಪಗೇರ ಪ್ರಭಾರ ಪಿಡಿಒ, ಮುನ್ನೂರು ಗ್ರಾ.ಪಂ. ರಸ್ತೆಬದಿ ತ್ಯಾಜ್ಯ ಎಸೆಯುವ ವಿಚಾರದಲ್ಲಿ ಹಿಂದಿಗಿಂತ ಜನರು ಸುಶಿಕ್ಷಿತರಾಗಿದ್ದಾರೆ. ಈ ನಡುವೆಯೂ ರಸ್ತೆಬದಿ, ಅದರಲ್ಲೂ ವೈದ್ಯಕೀಯ ಕಾಲೇಜುಗಳು ಇರುವಲ್ಲಿ ತ್ಯಾಜ್ಯ ರಾಶಿ ಉತ್ತಮ ಬೆಳವಣಿಗೆಯಲ್ಲ. ಈ ಬಗ್ಗೆ ಸ್ಥಳೀಯಾಡಳಿತ ಯಾವುದೇ ಮುಲಾಜು ತೋರಿಸದೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕ್ಷೇತ್ರದ ಘನತೆ ಹೆಚ್ಚಿಸಬೇಕು. ವಿವೇಕಾನಂದ ಎಲ್.ಸನಿಲ್, ಅಧ್ಯಕ್ಷ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ