

ಮಡಿಕೇರಿ: ಮಡಿಕೇರಿ ಲಯನ್ಸ್ ಸಂಸ್ಥೆಯ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಮದನ್ ಮಾದಯ್ಯ ಅಧಿಕಾರ ಸ್ವೀಕರಿಸಿದರು.
ಮಂಗಳೂರು ರಸ್ತೆಯಲ್ಲಿರುವ ಆಕ್ಸಿರಿಚ್ ಹೊಟೇಲ್ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಾಪ್ರಕಾಶ್ ಪದಗ್ರಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಲಯನ್ಸ್ ಕ್ಲಬ್ ನಿರಂತರ ಸೇವಾ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದು, ಎಲ್ಲಾ ಸದಸ್ಯರ ಸಹಕಾರದಿಂದ ಲಯನ್ಸ್ ಕ್ಲಬ್ ಮುನ್ನಡೆಯುತ್ತಿದೆ. ಅಧ್ಯಕ್ಷರಾದವರು ಕೆಲಸ ಮಾಡಿಸುವಂತಿರಬೇಕು. ಯುವಕರಿಗೆ ಧೈರ್ಯ ಮತ್ತು ಪ್ರೋತ್ಸಾಹ ನೀಡುವ ಕೆಲಸ ಆಗಬೇಕು. ಸಂಸ್ಥೆಯ ಅಭಿವೃದ್ಧಿ ದೃಷ್ಟಿಯಿಂದ ನಾಯಕತ್ವ, ಮಾರ್ಗದರ್ಶನ ಹಾಗೂ ಸೇವೆಯ ಗುಣಗಳನ್ನು ಹೊಂದಿರಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷ ಮದನ್ ಮಾದಯ್ಯ ಮಾತನಾಡಿ, ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ಹಲವು ಕಡೆ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಲಯನ್ಸ್‌ನ ಮುಖ್ಯ ಗುರಿ ಸೇವೆ ಮತ್ತು ಸಾಂಗತ್ಯವಾಗಿದೆ. ಬಡವರ ಹಾಗೂ ಸಾರ್ವಜನಿಕರ ಜನಪರ ಸೇವೆಯನ್ನು ಮಾಡಿಕೊಂಡು ಬಂದಿದೆ ಎಂದರು.
ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಲಯನ್ಸ್ ಕ್ಲಬ್ ಉತ್ತಮ ವೇದಿಕೆಯಾಗಿದೆ. ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ಪರಿಕರಗಳನ್ನು ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ಸಂಸ್ಥೆ ಬೆಳಕಾಗಿದೆ ಎಂದು ಹೇಳಿದರು.
ಲಯನ್ಸ್ ಕುಟುಂಬದ ಸಹಕಾರದಿಂದ ನಾನು ಈ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ಮುಂಬರುವ ದಿನಗಳ ಕಾರ್ಯ ಚಟುವಟಿಕೆಗಳಿಗೆ ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ನಿರ್ಗಮಿತ ಅಧ್ಯಕ್ಷ ನಟರಾಜು ಕೆಸ್ತೂರು ಮಾತನಾಡಿ, ಕಳೆದ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ಸೇವೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಅನುವು ಮಾಡಿಕೊಟ್ಟ ಪ್ರತಿಯೊಬ್ಬ ಸದಸ್ಯರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಲಯನ್ಸ್ ಸದಸ್ಯರ ಕೈಪಿಡಿ ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ವಲಯ ಅಧ್ಯಕ್ಷರಾದ ಕನ್ನಂಡ ಬೊಳ್ಳಪ್ಪ, ಸುಮನ್ ಬಾಲಚಂದ್ರ, ಮಹದೇವಪ್ಪ, ಪಿ.ಪಿ.ಸೋಮಣ್ಣ, ಡಾ.ಗಾಯತ್ರಿ ಪ್ರಕಾಶ್, ಕೋಶಾಧಿಕಾರಿ ಲಯನ್ ಕೆ.ದಾಮೋದರ್ ಹಾಜರಿದ್ದರು.