

ಬೆಳಗಾವಿ: ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದ ಕೃಷಿ ಜಮೀನಿನಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು 20 ಗಂಟೆಯೊಳಗೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.
ನಗರದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದ ಕೃಷಿ ಜಮೀನಿನಲ್ಲಿ ಸೋಮವಾರ ಸಚಿನ ಕಾಂಬಳೆ(26) ಎಂಬುವವರನ್ನು ಹತ್ಯೆ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅದೇ ಗ್ರಾಮದ ವಿಶಾಲ ನಾಯಕ, ಗಣೇಶ ಹರಿಜನ, ಬಾಳಗೌಡ ಪಾಟೀಲ ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಹಳೇ ದ್ವೇಷಕ್ಕಾಗಿ ಕೊಲೆ:ಮೃತ ಸಚಿನ ಸಹೋದರ ಶಿವಾನಂದ ಮದಮಕ್ಕನಾಳ ಮತ್ತಿತರ ಸುತ್ತಲಿನ ಊರುಗಳಲ್ಲಿ ಸೆಂಟರಿಂಗ್ ಕೆಲಸ ಮಾಡುತ್ತಿದ್ದರು. ಆರೋಪಿಗಳಾದ ವಿಶಾಲ, ಬಾಳಗೌಡ ಈ ಹಿಂದೆ ಶಿವಾನಂದ ಜತೆಗೆ ಇದ್ದರು. ಎಲ್ಲರೂ ಸೇರಿಕೊಂಡೇ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಇತ್ತೀಚೆಗೆ ಶಿವಾನಂದ ಅವರಿಂದ ದೂರವಾಗಿ, ಗಣೇಶ ಜತೆಗೆ ಕಾರ್ಯ ನಿರ್ವಹಿಸುತ್ತಿದ್ದರು. ಹಣ ಮತ್ತು ಸೆಂಟರಿಂಗ್ ಪ್ಲೇಟ್ ಕೊಡುವ ವಿಚಾರವಾಗಿ ಪರಸ್ಪರರ ಮಧ್ಯೆ ಭಿನ್ನಾಭಿಪ್ರಾಯ ಬೆಳೆಯಿತು. ಇತ್ತೀಚೆಗೆ ನಡೆದ ಮದುವೆಯಲ್ಲಿ ನೃತ್ಯ ಮಾಡುವ ವಿಷಯವಾಗಿ ವಿಶಾಲ ಮತ್ತು ಸಚಿನ ಹೊಡೆದಾಡಿದ್ದರು. ದ್ವೇಷವೇ ಕೊಲೆಗೆ ಕಾರಣ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೊಲೆ ಪ್ರಕರಣದಲ್ಲಿ ಮತ್ತೀಬ್ಬರು ಭಾಗಿಯಾದ ಅನುಮಾನವಿದೆ. ಅವರ ಬಂಧನಕ್ಕಾಗಿಯೂ ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದರು.