

ತುಮಕೂರು : ಶಿರಾ ಜನರ ಬದುಕು ಹಾಗೂ ರಾಜಕಾರಣದ ಜತೆ ಬೆಸೆದುಕೊಂಡಿರುವ ಮದಲೂರು ಕೆರೆ ಕೋಡಿ ಹರಿದಿದ್ದು, ಜನರು ಹರ್ಷಗೊಂಡಿದ್ದಾರೆ. ಕಳೆದ ವರ್ಷ ಉಪಚುನಾವಣೆ ಸಂದರ್ಭದಲ್ಲಿ ಚರ್ಚಿತ ವಿಷಯವಾಗಿದ್ದ ಮದಲೂರು ಕೆರೆ 3 ದಶಕದ ನಂತರ ಕೋಡಿ ಬಿದ್ದಿರುವುದು ಈ ಭಾಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.
ಶಿರಾ ಉಪಚುನಾವಣೆಯನ್ನು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಈ ಬಾರಿ ಚುನಾವಣೆಯಲ್ಲಿ ಮದಲೂರು ಕೆರೆಗೆ ಹೇಮೆ ಹರಿಸುವ ವಿಚಾರವನ್ನು ಬಿಜೆಪಿ ಅಸ್ತ್ರ ಮಾಡಿಕೊಂಡಿತ್ತು. ಆದರೆ, ಸಾಕಷ್ಟು ಜಿದ್ದಾಜಿದ್ದಿನ ನಂತರ ಹೇಮಾವತಿ ಹರಿಯಿತು, ದಾಖಲೆ ಪ್ರಮಾಣದ ಮಳೆಯೂ ಕೆರೆ ತುಂಬಲು ನೆರವಾಗಿದೆ.
ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸುವ ಉದ್ದೇಶದಿಂದ 2008ರಲ್ಲಿ 68 ಕೋಟಿ ರೂಪಾಯಿ ವೆಚ್ಚದಲ್ಲಿ 38ಕಿ.ಮೀ., ಉದ್ದದ ಮದಲೂರು ಕೆರೆಗೆ ನೀರು ಹರಿಸುವ ಸಿಮೆಂಟ್ ಕಾಲುವೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 2012ರಲ್ಲಿ ಕಾಮಗಾರಿ ಪೂರ್ಣಗೊಂಡು 2016ರಲ್ಲಿ ಹೇಮಾವತಿ ನೀರಿನ ಜತೆಗೆ ಮಳೆ ನೀರು ಕಳ್ಳಂಬೆಳ್ಳ ಕೆರೆಯಲ್ಲಿ ಹೆಚ್ಚು ಸಂಗ್ರಹವಾದ ಕಾರಣ ಪ್ರಾಯೋಗಿಕವಾಗಿ ಮದಲೂರು ಕಾಲುವೆಗೆ ಹೇಮಾವತಿ ನೀರು ಹರಿಸುವ ಕಾರ್ಯ ನಡೆದಿತ್ತು. ನಂತರ ಕೆರೆಗೆ ನೀರು ಹರಿಸುವ ವಿಚಾರ ಕೇವಲ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಾ ಬಂದಿತು. ಶಿರಾ ಉಪಚುನಾವಣೆಯಲ್ಲಿ ಆರೋಪ ಪ್ರತ್ಯಾರೋಪಗಳಿಗೆ ಆಹಾರವಾಗಿದ್ದ ಕೆರೆಗೆ ನೀರು ಹರಿಸಿ ಕೊಟ್ಟ ಮಾತು ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ಬಿಜೆಪಿ ಸರ್ಕಾರದ ಮೇಲಿತ್ತು. ನೀರು ಹಂಚಿಕೆ ಸಂಬಂಧ ಸಾಕಷ್ಟು ವಾದ, ವಿವಾದ ನಡೆಯುವಾಗಲೇ ಸುರಿದ ಭಾರಿ ಮಳೆ ಬಹುದಿನದ ಕನಸು ನನಸಾಗಿಸಿದೆ.
ಕೆರೆ ತುಂಬಿದರೂ ನಿಲ್ಲದ ರಾಜಕಾರಣ! : ಮದಲೂರು ಕೆರೆ ಕೋಡಿ ಹರಿಯಲಾರಂಭಿಸಿದರೂ ರಾಜಕೀಯ ಮುಖಂಡರ ಆರೋಪ, ಪ್ರತ್ಯಾರೋಪ ನಿಂತಿಲ್ಲ. ಅಪರೂಪಕ್ಕೆ ಸುರಿದ ಭರ್ಜರಿ ಮಳೆ, ಜನರ ಒತ್ತಾಯಕ್ಕೆ ಹರಿದ ಹೇಮಾವತಿ ನೀರು ಜತೆಯಾಗಿ 506 ಎಕರೆ ವಿಸ್ತೀರ್ಣದ ಕೆರೆ ಕೋಡಿ ಹರಿದಿದ್ದು ಇದರ ಲಾಭ ಪಡೆಯಲು ರಾಜಕಾರಣಿಗಳು ಮಾತನಾಡಲಾರಂಭಿಸಿದ್ದಾರೆ.
ಬಾಗಿನ ಅರ್ಪಿಸುವ ನೆಪದಲ್ಲಿ ರಾಜಕಾರಣಿಗಳ ದಂಡೇ ಹರಿದುಬರುತ್ತಿದೆಯಾದರೂ ಜನರು ಮಾತ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನೆಮ್ಮದಿಯಿಂದ ಪ್ರಕೃತಿ ಸೊಬಗು ಸವಿಯಲಾರಂಭಿಸಿದ್ದಾರೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಶಾಸಕ ರಾಜೇಶ್‌ಗೌಡ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವು ನಾಯಕರು ಕೆರೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಬಿಎಸ್‌ವೈ ಭಾಷಣದ ವೀಡಿಯೋ ವೈರಲ್ : ಶಿರಾ ಉಪಚುನಾವಣೆ ಸಂದಭದಲ್ಲಿ ಮದಲೂರು ಕೆರೆ ಅಂಗಳದಲ್ಲಿ ನಡೆದ ಸಮಾವೇಶದಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಮದಲೂರು ಕೆರೆ ತುಂಬಿಸುವುದಾಗಿ ನೀಡಿದ್ದ ಭರವಸೆಯ ಭಾಷಣದ ವಿಡಿಯೋ ವೈರಲ್ ಆಗಿದೆ. ಅಕ್ರಮ ಮರಳುಗಾರಿಕೆಗೆ ಕುಖ್ಯಾತಿ ಪಡೆದಿದ್ದ ಕೆರೆಗೆ ಹೇಮಾವತಿ ನೀರು ಹರಿಸಲು ಬಿಎಸ್‌ವೈ ಕೊಡುಗೆಯನ್ನು ಜನರು ಸ್ಮರಿಸಲಾರಂಭಿಸಿದ್ದಾರೆ. ಅಂದು ಭಾಷಣದಲ್ಲಿ ಬಿಎಸ್‌ವೈ ಮುಂದಿನ ಆರು ತಿಂಗಳಲ್ಲಿ ಮದಲೂರು ಕೆರೆ ತುಂಬಿಸುವುದಾಗಿ ಭರವಸೆ ನೀಡಿದ್ದರು. ವಿವಿಧ ತಾಂತ್ರಿಕ ಕಾರಣದಿಂದಾಗಿ ಕೊಂಚ ತಡವಾದರೂ ಕೆರೆ ಕೋಡಿ ಹರಿದಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಜನರು ಶನಿವಾರ ಬಿ.ವೈ.ವಿಜಯೇಂದ್ರ ಅವರನ್ನು ಕರೆದು ಅವರಿಂದಲೇ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಕೃತಜ್ಞತೆ ಅರ್ಪಿಸಿದರು.
ನಾಡಿನಲ್ಲಿ ನುಡಿದಂತೆ ನಡೆಯುವ ಶಕ್ತಿ ಇರುವ ವ್ಯಕ್ತಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು. ಶಿರಾ ಉಪಚುನಾವಣೆಯಲ್ಲಿ ನುಡಿದಂತೆ ಇಂದು ಮದಲೂರು ಕೆರೆ ತುಂಬಿ ಕೋಡಿ ಹರಿದೆ. ರೈತರ ಅಮತಹಸ್ತದಿಂದಲೇ ಭಾಗಿನ ಅರ್ಪಿಸಲಾಗಿದೆ, ಮದಲೂರು ಕೆರೆ ತುಂಬಿರುವುದಕ್ಕೆ ನಮಗೂ ಖುಷಿ, ಹೆಮ್ಮೆ ಇದೆ. ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಉಪಾಧ್ಯಕ್ಷ