ವರ್ಚಸ್ಸಿನ ಬಲದಿಂದ ಪ್ರಧಾನಿ ಪಟ್ಟ

chn june 14 bjp sabhe. (1)
Published on

ಚನ್ನಗಿರಿ: ನರೇಂದ್ರ ಮೋದಿಯವರು ತಮ್ಮ ವರ್ಚಸ್ಸಿನಿಂದ ಮೂರು ಬಾರಿ ದೇಶದ ಪ್ರಧಾನಿಯಾದರು, ಜತೆಗೆ ಗುಜರಾತ್ ಚುನಾವಣೆಯಲ್ಲಿ ಗೆಲುವು ತಂದು ಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಪ್ರಧಾನಿ ಮೋದಿಯವರ ವಿಕಸಿತ ಭಾರತದ ಅಮೃತ ಕಾಲ ಸೇವೆ, ಸುಶಾಸನ, ಬಡವರ ಕಲ್ಯಾಣದ 11 ವರ್ಷ ಅಭಿಯಾನದ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ನಾಯಕತ್ವ ದೃಢವಾಗಿದ್ದರೆ ಅಂತಹ ನಾಯಕತ್ವದ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ಬಹಳ ತೀಕ್ಷ್ಣವಾಗಿಯೇ ಇರುತ್ತವೆ. ಅದಕ್ಕೆ ಮೋದಿಯವರ ನಾಯಕತ್ವ ಸೂಕ್ತ ಉದಾಹರಣೆಯಾಗಿದೆ. ಮೋದಿಯವರ ಬೆಂಬಲಿಗರು 11 ವರ್ಷದಲ್ಲಿ ದೇಶದ ಅಭಿವೃದ್ಧಿಯಲ್ಲಿ ಉತ್ತಮ ಸಹಕಾರ ನೀಡಿದ್ದಾರೆ. ಅದರ ಪ್ರತಿಫಲದಿಂದ ಭಾರತ ವಿಶ್ವದಲ್ಲಿ ಆರ್ಥಿಕತೆಯಲ್ಲಿ ನಾಲ್ಕನೇ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.

ಮೋದಿಯವರನ್ನು ಸ್ವತಂತ್ರ ಭಾರತದ ಶಕ್ತಿಯುತ ಪ್ರಧಾನಿ ಎಂದು ಕರೆಯಲಾಗಿದೆ. ಜನಧನ್​ನಿಂದ 55 ಕೋಟಿ ಜನಸಾಮಾನ್ಯರಿಗೆ ಬ್ಯಾಂಕ್ ಖಾತೆ, 10 ಕೋಟಿ ಮನೆ ಯೋಜನೆಯಿಂದ ಅನಿಲ ಸಂಪರ್ಕ, ಕಿಸಾನ್ ಸಮ್ಮಾನ್​ನಿಂದ ರೈತರಿಗೆ ನೇರ ಸಹಾಯಧನ, ಆಯುಷ್ಮಾನ್ ಯೋಜನೆಯಲ್ಲಿ ಬಡವರಿಗೆ 5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚಕ್ಕೆ ನೆರವು ಹೀಗೆ ಅನೇಕ ಯೋಜನೆಗಳ ಮೂಲಕ ಬಡವರಿಗೆ ನೆರವು ನೀಡಿದ್ದಾರೆ ಎಂದರು.

ಮುಸ್ಲಿಂ ಮಹಿಳೆಯರ ಜೀವನ ಭದ್ರತೆಯ ದೃಷ್ಟಿಯಿಂದ ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಪಡಿಸಿದರು, ಪೌರತ್ವ ತಿದ್ದುಪಡಿ ಕಾಯ್ದೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು ಪಡಿಸಿ ದೇಶದಲ್ಲಿ ಪೂರ್ತಿಯಾಗಿ ವಿಲೀನಗೊಳಿಸಿದರು. ದೇಶದ ಅಸ್ಮಿತೆಯ ಸಂಕೇತವಾದ ರಾಮ ಮಂದಿರದ ನಿರ್ವಣ, ಆಧಾರ್ ಯೋಜನೆಯ ಅನುಷ್ಠಾನ, ಗ್ರಾಮೀಣ ವಿದ್ಯುದೀಕರಣ, ಮನೆಗಳಿಗೆ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ಯೋಜನೆಗಳು ಭಾರತೀಯರಲ್ಲಿ ಮಾನ್ಯತೆ ಪಡೆದಿದೆ ಎಂದು ಹೇಳಿದರು.

ಈ ಸಾಲಿನ ಅಂತ್ಯದ ಒಳಗಡೆ ಜಿಲ್ಲಾ, ತಾಲೂಕು ಮತ್ತು ಗ್ರಾಪಂ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಪಕ್ಷದ ಕಾರ್ಯಕರ್ತರು ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿಯುವಂತೆ ಮಾಡಬೇಕಿದೆ ಎಂದರು.

ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ದೇಶದಲ್ಲಿ 10 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ. ಸಂಘಟನೆ ಕೊರತೆಯಿಂದ ಅಧಿಕಾರದಿಂದ ವಂಚಿತರಾಗಿದ್ದೇವೆ. ಮುಂದಿನ ದಿನದಲ್ಲಿ ಎಲ್ಲರೂ ಸಂಘಟಿತರಾದರೆ ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯಬಹುದಾಗಿದೆ ಎಂದರು.

ಸ್ವಚ್ಛ ಭಾರತ್ ಅಭಿಯಾನದಿಂದ ನಗರ, ಗ್ರಾಮಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ, 12 ಕೋಟಿ ಶೌಚಗೃಹಗಳು ನಿರ್ವಣವಾಗಿವೆ, ಇದಕ್ಕೆಲ್ಲ ಕಾರಣ ಮೋದಿಯವರು ಜಾರಿಗೆ ತಂದ ಯೋಜನೆಗಳು ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್ ಮಾತನಾಡಿ, ಮೋದಿಯವರು ದೇಶದ ಪ್ರಧಾನಿ ಹುದ್ದೆ ಏರಿದ ನಂತರದಲ್ಲಿ ಜನಸಾಮಾನ್ಯರ ಹಾಗೂ ಬಡವರಿಗಾಗಿ 176 ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರದಲ್ಲಿ ನಡೆಸಿರುವ ಸಮೀಕ್ಷೆಯಂತೆ ಇಂದೇ ರಾಜ್ಯದಲ್ಲಿ ಚುನಾವಣೆ ನಡೆಸಿದರೂ ಬಿಜೆಪಿ 164 ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಪಿ. ಲೋಹಿತ್​ಕುಮಾರ್, ಬಸವರಾಜ್ ದೇವರಹಳ್ಳಿ, ನಲ್ಲೂರು ರುದ್ರೇಗೌಡ್ರು, ಶಿವಣ್ಣ ನಲ್ಲೂರು, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಕಾಯಿ ಮಂಜಣ್ಣ, ತುಮ್ೋಸ್ ಮಾಜಿ ಅಧ್ಯಕ್ಷ ಆರ್.ಎಂ. ರವಿ, ಸಂತೇಬೆನ್ನೂರು ಬಸವರಾಜ್, ಕೆಂಚಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net