ಸ್ತ್ರೀಯರ ಪ್ರಗತಿಗೆ ಶೇ.30 ರಷ್ಟು ಮೀಸಲಾತಿ ವರದಾನ

23 CHN
Published on

ಚನ್ನಗಿರಿ: ಕೇಂದ್ರ ಸರ್ಕಾರ ಮಹಿಳೆಯರ ಅಭಿವೃದ್ಧಿ ಬಯಸಿ ಶೇ.30 ರಷ್ಟು ಮೀಸಲಾತಿ ಜಾರಿಗೆ ತರುತ್ತಿದ್ದು ಇದರಿಂದ ಅವರು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ಬರಲು ನೆರವಾಗುತ್ತದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು.

ತಾಲೂಕಿನ ಶ್ರೀ ರಾಘವೇಂದ್ರ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪುರುಷರಿಗೆ ಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡಿರುವ ಹೆಣ್ಣುಮಕ್ಕಳು ಮಗಳಾಗಿ, ತಾಯಿಯಾಗಿ, ಹೆಂಡತಿಯಾಗಿ, ಅಜ್ಜಿಯಾಗಿ ಕುಟುಂಬ ನಿರ್ವಹಣೆ ಜತೆಗೆ ನಿಭಾಯಿಸುತ್ತಾಳೆ. ಎಲ್ಲಿ ಹೆಣ್ಣುಮಕ್ಕಳು ಕೆಲಸ ಮಾಡುತ್ತಾರೋ ಅಲ್ಲಿ ಪ್ರಾಮಾಣಿಕತೆ, ನಿಷ್ಠೆ, ಶ್ರದ್ಧೆ ಕಾಣಬಹುದು ಎಂದರು.

ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆಗಳನ್ನು ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶೂನ್ಯ ಕೊಡುಗೆ ನೀಡುತ್ತಿದೆ. ಉಚಿತ ಕೊಡುಗೆ ನೀಡುವುದು ತಪ್ಪಲ್ಲ ಅದರ ಜತೆಗೆ ಅಭಿವೃದ್ಧಿಗೂ ಅನುದಾನ ನೀಡಬೇಕು ಎಂದು ತಿಳಿಸಿದರು.

ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ತಿಳಿದಿದ್ದರೂ ಯಾರೂ ಅದನ್ನು ತಡೆಯಲು ಮುಂದಾಗುತ್ತಿಲ್ಲ. ಹೆಣ್ಣು ಭ್ರೂಣಹತ್ಯೆಯಂತಹ ಪಾಪ ಕೃತ್ಯಗಳಿಗೆ ಸಹಕಾರ ನೀಡಬಾರದು ಎಂದರು.

ಲೇಖಕಿ ಸುನಿತಾ ರಾಜು ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದಕ್ಕೆ ನೂರಾರು ಕಾರಣಗಳು ಇವೆ. ಪುರುಷನ ಸಾಧನೆಯ ಹಿಂದೆ ಹೆಣ್ಣಿನ ಕಾಣದ ಕೈ ಇರುತ್ತದೆ. ಅವರನ್ನು ಗೌರವಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಮಹಿಳೆಗೆ ಸ್ಥಾನಮಾನ ನೀಡದಿದ್ದರೂ ಪರವಾಗಿಲ್ಲ ಸ್ವಾತಂತ್ರ್ಯ ನೀಡಿ, ಆಗ ಮಾತ್ರ ಅವಳು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಇದೇ ವೇಳೆ ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ, ಸದಸ್ಯೆ ಕಮಲಾ ಹರೀಶ್, ಸವಿತಾ ರಾಘವೇಂದ್ರ, ಲತಾ ರಾಜೇಶ್, ಸುವರ್ಣಮ್ಮ, ತಾಪಂ ಮಾಜಿ ಉಪಾಧ್ಯಕ್ಷೆ ಗಾಯಿತ್ರಿ, ತಾಪಂ ಮಾಜಿ ಅಧ್ಯಕ್ಷ ಪಿ. ಲೋಹಿತ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net