ಮದಲೂರು ಕೆರೆಗೆ ನೀರು ಹರಿಸುವುದು ಕಾನೂನುಬಾಹಿರ ; ಸಂಸದ ಬಸವರಾಜು ವಿರುದ್ಧ ಸಚಿವ ಮಾಧುಸ್ವಾಮಿ ಗರಂ

Sudhee_27_Madhuswamy_PM_@_VS (3)
Published on

ತುಮಕೂರು: ಕಾವೇರಿ ನ್ಯಾಯಾಧೀಕರಣದ ನಂತರ ಕೃಷ್ಣಕೊಳ್ಳಕ್ಕೆ ಹೇಮಾವತಿ ನೀರು ಹಂಚಿಕೆಯಾಗಿಲ್ಲ, ಶಿರಾ ತಾಲೂಕಿನ ಯಲಿಯೂರು ಬಹುಗ್ರಾಮ ಕುಡಿಯುವ ನೀರಿಗೆ ನೀರು ಕೊಡಲು ನಮಗೆ ಸಾಧ್ಯವಾಗಿಲ್ಲ, ಮದಲೂರು ಕೆರೆಗೆ ನೀರು ಹರಿಸುವುದು ಕಾನೂನುಬಾಹಿರ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪುನರುಚ್ಚರಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅಧಿಕಾರದಲ್ಲಿದ್ದ ಮದಲೂರು ಕೆರೆಗೆ ಆರ್‌ಡಿಪಿಆರ್ ಇಲಾಖೆ ಹಣದಲ್ಲಿ ನಾಲೆ ಮಾಡಿದರು, ನೀರು ಹಂಚಿಕೆ ಕೇಳಿದ್ದರು. ಆದರೆ, ಅಧಿಕೃತವಾಗಿ ನೀರಾವರಿ ಇಲಾಖೆಯಿಂದ ಮದಲೂರು ಕೆರೆಗೆ ನೀರು ಹಂಚಿಕೆಯಾಗಲಿಲ್ಲ. ಯಾವುದೋ ದಾಖಲಾತಿ ಆಧಾರದ ಮೇಲೆ 0.4ಟಿಎಂಸಿ ನೀರು ಹಂಚಿಕೆಯಾಗಿದೆ ಎಂದು ಬರೆದುಕೊಂಡರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕುಣಿಗಲ್ ಮೂಲದವರು ಯಾರೊ ಕೋರ್ಟ್‌ಗೆ ಹೋಗಿದ್ದು, ನ್ಯಾಯಾಲಯ ಕೂಡ 0.4ಟಿಎಂಸಿ ಒಳಗೆ ಶಿರಾ ತಾಲೂಕಿಗೆ ನೀರು ಬಳಸಬಹುದು ಎಂದು ತೀರ್ಪು ನೀಡಿದೆ, 0.9ಟಿಎಂಸಿ ನೀರು ಕಳ್ಳಂಬೆಳ್ಳ ಹಾಗೂ ಶಿರಾ ನಗರದ ಕೆರೆಗೆ ಮಾತ್ರ ಸಾಕಾಗುತ್ತಿದ್ದು ಜಯಚಂದ್ರ ನಿರ್ಮಿಸಿದ್ದ ಬೃಹತ್ ಚೆಕ್‌ಡ್ಯಾಂ ದಾಟಿ ಮದಲೂರು ಕೆರೆಗೆ ನೀರು ತಲಪಲು ಸಾಧ್ಯವಿಲ್ಲ ಎಂದರು.

ರಾಜಕೀಯ ಕಾರಣಕ್ಕೆ ಮದಲೂರು ಕೆರೆಗೆ ಜಯಚಂದ್ರ ನೀರು ಕೇಳುತ್ತಿದ್ದಾರೆ, ಉಪಚುನಾವಣೆಯಲ್ಲಿ ಬಂದಿರುವ ಮತಗಳನ್ನು ತೆಗೆದು ನೋಡಿದರೆ ಅವರ ತಂತ್ರ ಅರ್ಥವಾಗಲಿದೆ, ಜಯಚಂದ್ರಕ್ಕೆ ದೊಡ್ಡತನವಿದ್ದರೆ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲು ರೈತರ ಮನವೊಲಿಸಲಿ ಎಂದು ಸವಾಲೆಸೆದರು.

ಶಿರಾ ತಾಲೂಕಿನಲ್ಲಿ ನೀರು ಹರಿಸಲು ಇರುವ ನಿಯಮಗಳನ್ನು ಬದಲಾಯಿಸಿ ಜನರೊಂದಿಗೆ ಸಂಘರ್ಷ ಮಾಡಲು ನನಗೆ ಇಷ್ಟವಿಲ್ಲ, ಹೈಕೋರ್ಟ್ ಸೂಚಿಸಿರುವಂತೆ 0.9ಟಿಎಂಸಿ ನೀರನ್ನು ಅವರಿಗೆ ಎಲ್ಲಿಗೆ ಬೇಕೊ ಅಲ್ಲಿಗೆ ಬಿಟ್ಟುಕೊಳ್ಳಲಿ ಅದಕ್ಕಿಂತ ಹೆಚ್ಚು ನಿರು ಬಿಡಲು ನ್ಯಾಯಾಧೀಕರಣ ಅವಕಾಶ ನೀಡುವುದೇ ಇಲ್ಲ ಎಂದರು.

ಮದಲೂರು ಕೆರೆಗೆ ಹೇಮಾವತಿ ನೀರು ಹಂಚಿಕೆಯಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ಮಾತನಾಡಿರುವ ಬಗ್ಗೆ ನನಗೆ ಒಪ್ಪಿಗೆ ಇಲ್ಲ, ಇತ್ತೀಚೆಗೆ ನೀರಾವರಿ ನಿಮಗದ ಎಂಡಿ ಕಚೇರಿಗೆ ಹೋಗಿಬಂದು ಈರೀತಿ ಹೇಳಿಕೆ ನೀಡಿದ್ದಾರೆ, ನಾನು ಅಧಿಕಾರಿಗಳಿಂದ ಮಿಸ್‌ಗೈಡ್ ಆಗಿದ್ದರೆ ಇವರೇ ಗೈಡ್ ಮಾಡಬೇಕಿತ್ತು ಎಂದು ಅಸಮಧಾನ ಹೊರಹಾಕಿದರು.

ಮದಲೂರು ಕೆರೆಗೆ ಹೇಮಾವತಿ ನೀರಿನ ಹಂಚಿಕೆ ಕುರಿತು ಅಧಿಕಾರಿಗಳು ನನಗೆ ಮಿಸ್‌ಗೈಡ್ ಮಾಡಿದ್ದಾರೆ ಎಂದು ಸಂಸದ ಬಸವರಾಜು ಹೇಳಿದ್ದಾರೆ, ಆ ಸಂದರ್ಭದಲ್ಲಿ ಅವರೇ ನನ್ನ ಜತೆ ಇದ್ದರೂ ಗೈಡ್ ಮಾಡಬಹುದಿತ್ತು. ಇತ್ತೀಚೆಗೆ ಎಂಡಿ ಕಚೇರಿಗೆ ಹೋಗಿ ಬಂದು ಹೀಗೇಳಿದ್ದಾರೆ, ಇವರೇನು ಶಿರಾ ಕ್ಷೇತ್ರದ ಸಂಸದರಾಗಿರಲಿಲ್ಲ ಅದೇಕೆ ಶಿರಾಗೆ ಹೇಮಾವತಿ ನೀರು ಹಂಚಿಕೆಗೆ ಶ್ರಮಿಸಿದ್ದರು ಎಂಬುದು ನನಗಂತೂ ತಿಳಿದಿಲ್ಲ. ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net