

ಚಿಕ್ಕಮಗಳೂರು: ವೀರಮದಕರಿ ನಾಯಕನ ಆಳ್ವಿಕೆಯಲ್ಲಿ ಗುಡಿ, ಗೋಪುರ, ಕಲ್ಯಾಣಿ ನಿರ್ಮಿಸುವ ಜತೆಗೆ ಎಲ್ಲ ಸಮುದಾಯದೊಂದಿಗೆ ಸೌಹಾರ್ದಯುತ ಆಳ್ವಿಕೆ ನಡೆಸಿದ್ದರು ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘದ ಅಧ್ಯಕ್ಷ ಜಗದೀಶ್ ಕೋಟೆ ಹೇಳಿದರು.
ನಗರದ ದೋಣಿಖಣದ ವಾಕ್ಮೀಕಿ ನಾಯಕ ಯುವಕರ ಸಂಘದ ಕಚೇರಿಯಲ್ಲಿ ನಡೆದ ವೀರಮದಕರಿ ನಾಯಕರ ಜನ್ಮ ದಿನ ಕಾರ್ಯಕ್ರಮದಲ್ಲಿ ಮದಕರಿ ನಾಯಕನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ರಾಜ ವೀರ ಮದಕರಿನಾಯಕ ಪಾಳೆಗಾರರಲ್ಲಿ ಸುಭದ್ರ ಆಡಳಿತದೊಂದಿಗೆ ಎಲ್ಲ ವರ್ಗದ ಜನತೆಗೆ ಸಮಾನ ಅವಕಾಶ ಕಲ್ಪಿಸಿದ್ದರು ಎಂದರು.
ಮದಕರಿ ನಾಯಕರ ಆಡಳಿತ, ಅವರ ಧೈರ್ಯ, ಜನಪರ ಕಾಳಜಿಯನ್ನು ನಾವುಗಳು ಅರಿತುಕೊಂಡು ಅವರಿಗೆ ಗೌರವ ಬರುವಂತೆ ನಾವು ಬದುಕಿ ತೋರಿಸಬೇಕು. ಇಂದಿನ ಯುವಪೀಳಿಗೆ ಅವರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಇತಿಹಾಸದಲ್ಲಿ ಮದಕರಿ ನಾಯಕ ಎಂದೆಂದಿಗೂ ಅಜರಾಮರ. ಇವರ ಶೌರ್ಯ, ಧೈರ್ಯ, ಸಾಹಸ ಶ್ಲಾಘನೀಯ. ಚಿತ್ರದುರ್ಗ ನಾಯಕರ ಅಳ್ವಿಕೆಯ ಕೊನೆಯ ಅರಸರಾಗಿದ್ದ ಇವರನ್ನು ಗಂಡುಗಲಿ ಮದಕರಿ ನಾಯಕ, ದುರ್ಗದ ಹುಲಿ ಎಂದು ಹಲವು ಬಿರುದುಗಳಿಂದ ಜನ ಕರೆಯುತ್ತಿದ್ದರು ಎಂದು ಸ್ಮರಿಸಿದರು.
ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಜಗದೀಶ್ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಮಧುಕುಮಾರ್, ತಾಲೂಕು ಅಧ್ಯಕ್ಷ ಪ್ರದೀಪ್, ಗೌರವ ಅಧ್ಯಕ್ಷ ವಿಜಯ ಕುಮಾರ್, ಪ್ರದಾನ ಕಾರ್ಯದರ್ಶಿ ಯತೀಶ್, ಸಂಚಾಲಕರಾದ ವೀರಪ್ಪ, ಚಂದ್ರು, ಮುಳ್ಳಪ್ಪ, ಜಿಲ್ಲಾ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಯತೀಶ್ ಮತ್ತಿತರರಿದ್ದರು.