

ಕಲಘಟಗಿ: ಆತ್ಮಕಲ್ಯಾಣ ಮತ್ತು ಲೋಕಕಲ್ಯಾಣದ ಸಾಧನವಾಗುವ ಬಸವಣ್ಣನವರ ಅನುಭವ ಮಂಟಪದಲ್ಲಿ ಹೂಗಾರ ಮಾದಯ್ಯನವರು ಕಾಯಕ ಮತ್ತು ದಾಸೋಹ ಕೈಗೊಂಡು ಮಹಾನ್ ಶರಣರಾಗಿದ್ದರು ಎಂದು ಹೂಗಾರ ಸಮಾಜದ ಮುಖಂಡ ಗಿರೀಶ ಮುಕ್ಕಲ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಹೂಗಾರ ಮಾದಯ್ಯ ಮಹಿಳಾ ಸ್ವ-ಸಹಾಯ ಸಂಘವು ಆಯೋಜಿಸಿದ್ದ ಶರಣ ಹೂಗಾರ ಮಾದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಶರಣ ಹೂಗಾರ ಮಾದಯ್ಯ ದಂಪತಿ ವಿಶ್ವಗುರು ಬಸವಣ್ಣನವರ ಕಲ್ಯಾಣದ ಮಹಾಮನೆಗೆ ನಿತ್ಯ ಇಷ್ಟಲಿಂಗ ಪೂಜೆಗೆ ಪತ್ರೆ ಹಾಗೂ ಪುಷ್ಪಗಳನ್ನು ತರುತ್ತಿದ್ದರು. ನಿತ್ಯ ಕಾಯಕ ಮಾಡುವಾಗ ಸಮಾನತೆಯ ವಚನಗಳನ್ನು ಓದುವುದು, ಕಾಯಕ, ದಾಸೋಹ, ಲಿಂಗಾಂಗಯೋಗ, ಪ್ರಸಾದ ಮತ್ತು ಧರ್ಮಗಳ ಬಗ್ಗೆ ಚಿಂತನೆ ನಡೆಸುತ್ತಿದ್ದರು ಎಂದರು.
ಅನಂತನ ಹುಣ್ಣಿಮೆಯಂದು ಹೂಗಾರ ಮಾದಯ್ಯ ಜಯಂತಿ ಆಚರಿಸಲಾಗುತ್ತಿದೆ. ಬಸವಾದಿ ಶರಣರಲ್ಲಿ ಹೂಗಾರ ಮಾದಯ್ಯನವರೂ ಕೂಡ ಒಬ್ಬ ಶರಣರು. 12ನೇ ಶತಮಾನದಿಂದಲೇ ಹೂಗಾರ ವೃತ್ತಿ ಶರಣಕುಲಕ್ಕೆ ಮತ್ತು ಸಮಾಜಕ್ಕೆ ಪುಷ್ಪ ಮತ್ತು ಬಿಲ್ವಪತ್ರೆಯನ್ನು ಪೂಜೆಗೆ ಒದಗಿಸುತ್ತ ಬಂದಿದೆ ಎಂದರು.
ಗುರುಶಾಂತವ್ವ ಪೂಜಾರ, ಯಲ್ಲವ್ವ ಮುಕ್ಕಲ್ಲ, ವಿಜಯಲಕ್ಷ್ಮೀ ಮುಕ್ಕಲ್ಲ, ಗೀತಾ ಕುರ್ಡೆಕರ, ಶಿವಲೀಲಾ ಮುಕ್ಕಲ್ಲ, ಯಲ್ಲವ್ವ ಪೂಜಾರ, ಶಶಿಕಲಾ ದೈವಜ್ಞ, ಅನಿತಾ ಹೂಗಾರ, ಶ್ವೇತಾ ಮುಕ್ಕಲ್ಲ, ಈಶ್ವರಿ ಮುಕ್ಕಲ್ಲ, ಮಹದೇವಪ್ಪ ಹೂಗಾರ, ಸೋಮಶೇಖರ ಪೂಜಾರ, ಅಂಜನಾ ಪೂಜಾರ ಇತರರು ಹೂಗಾರ ಮಾದಯ್ಯನವರ ಮಹಿಳಾ ಸ್ವ-ಸಹಾಯ ಸಂಘದ ಸರ್ವ ಸದಸ್ಯರು ಹೂಗಾರ ಸಮಾಜ ಬಾಂಧವರು ಇದ್ದರು.