

ನಾಪೋಕ್ಲು : ಒಂದು ಕೆಜಿ ತರಕಾರಿ ಬೆಲೆ ಸಾಮಾನ್ಯವಾಗಿ 60 ರಿಂದ 80 ರೂ.ಗೆ ಏರಿದರೆ ನಾವು ಹೌಹಾರುತ್ತೇವೆ. ಕೆಲವರು ಆ ತರಕಾರಿ ಖರೀದಿಯನ್ನೇ ಬಿಟ್ಟುಬಿಡುತ್ತಾರೆ. ದರ ಕಡಿಮೆಯಾದಮೇಲೆ ಅದರತ್ತ ನೋಡುತ್ತಾರೆ. ಆದರೆ ಈ ತರಕಾರಿಗೆ ಈಗ ಕೆ.ಜಿ. 200 ರೂ. ಇದು ಮಡಹಾಗಲ ಕಾಯಿ. ಬಹಳಷ್ಟು ನಗರವಾಸಿಗಳು ಇದರ ಹೆಸರನ್ನು ಕೇಳಿಯೇ ಇಲ್ಲ. ಆದರೆ ಇದಕ್ಕೆ ಈಗ ಸೀಸನ್ ಬಂದಿದೆ. ಸ್ಥಳೀಯ
ಮಾರುಕಟ್ಟೆಗಳಲ್ಲಿ ಇದು ಈಗ ಭರದಿಂದ ಮಾರಾಟವಾಗುತ್ತಿದೆ. ಕಣಿಲೆ, ಮರಕೆಸ ಸೇರಿದಂತೆ ವಿವಿಧ ತರಕಾರಿಗಳು ಕೊಡಗಿನಲ್ಲಿ ಮಳೆಗಾಲದಲ್ಲಿ ಮಾರಾಟವಾಗುತ್ತಿದ್ದರೆ ಈಗ ಅವುಗಳ ಸಾಲಿಗೆ ಮಡಹಾಗಲ ಕಾಯಿಯೂ ಸೇರ್ಪಡೆಗೊಂಡಿದೆ. ಅಂದಹಾಗೆ ಮಡಹಾಗಲ ಪೌಷ್ಟಿಕಾಂಶವುಳ್ಳ ತರಕಾರಿಯಾಗಿದೆ. ಹಾಗಾಗಿ ಇತ್ತೀಚಿನ ದಶಕದಲ್ಲಿ ಇದಕ್ಕೆ ಅಧಿಕ ಬೇಡಿಕೆ ಒಂದೊದಗಿದೆ.
ಮೊದಲು ಕಾಡಿನಲ್ಲಿ ಲಭಿಸುತ್ತಿದ್ದ ಮಡಹಾಗಲವನ್ನು ಈಗ ಮನೆಯಲ್ಲೇ ಬೆಳೆಯುವಲ್ಲಿ ಹಲವರು ಆಸಕ್ತಿ ತೋರುತ್ತಿದ್ದಾರೆ. ಹೈಬ್ರೀಡ್ ತಳಿ ಗಿಡಗಳೂ ಲಭಿಸುತ್ತಿವೆ. ಇದು ಹೆಚ್ಚಿನ ಖರ್ಚು ಇಲ್ಲದೇ ಬೆಳೆಯಬಲ್ಲದು.
ರುಚಿಕರ ತರಕಾರಿಯೂ ಆಗಿದೆ.