ಮದಗಕ್ಕೆ ಬೇಕು ಕಾಯಕಲ್ಪ, ಜಲಮೂಲ ಬತ್ತಿ ಕೊಡ್ಲುಹಾಡಿ ವ್ಯಾಪ್ತಿಯ ಭೂಮಿ ಬರಡು

madaga
Published on

ಕುಂದಾಪುರ: ಹಕ್ಲಾಡಿ ಗ್ರಾಮ ಪಂಚಾಯಿತಿ ತೆಕ್ಕೆಯಲ್ಲಿ ಬಂಟ್ವಾಡಿ ಬಳಿ ಇರುವ ಕೊಡ್ಲುಹಾಡಿ ಮದಗ ನಿರ್ಲಕ್ಷೃಕ್ಕೆ ಹೂಳಿಂದ ಮುಚ್ಚಿ ಹೋಗಿದೆ. ನೂರಾರು ಎಕರೆ ಪ್ರದೇಶಕ್ಕೆ ನೀರು, ಕುಡಿಯುವ ನೀರಿನ ಶಕ್ತಿ ಕೇಂದ್ರ ಬರಿದಾಗಿ ಕೃಷಿ ಭೂಮಿ ಹಡಿಲು ಬಿದ್ದರೆ, ಕಡು ಬೇಸಿಗೆಯಲ್ಲಿ ನೀರಿಗಾಗಿ ಟ್ಯಾಂಕರ್ ಆಶ್ರಯಿಸುವ ಸ್ಥಿತಿ ಉಂಟಾಗಿದೆ.

ಕೊಡ್ಲುಹಾಡಿ ಮದಗ ಹೂಳೆತ್ತುವ ಮೂಲಕ ಗತಕಾಲದ ನೀರಿನ ವೈಭವಕ್ಕೆ ಮತ್ತೆ ಮರಳಲು ಸಾಧ್ಯ. ವಿಶಾಲ ಮದಗ ಹೂಳೆತ್ತಿ ತಪ್ಪುತ್ತಿರುವ ನೀರಿನ ಸಮತೋಲನ ಕಾಪಾಡಬೇಕು ಎಂಬುದು ಪರಿಸರದ ನಾಗರಿಕರ ಒತ್ತಾಯ.

ಫೆಬ್ರವರಿ ತನಕ ನೀರಿರುತ್ತಿತ್ತು: ಮೂರು ದಶಕದ ಹಿಂದೆ ಆಲೂರು ಮುಳ್ಳಿಕಟ್ಟೆ ರಸ್ತೆ ಬದಿಯಲ್ಲಿರುವ ಕೊಡ್ಲುಹಾಡಿ ಮದಗದಲ್ಲಿ ಫೆಬ್ರವರಿ ತನಕ ನೀರಿರುತ್ತಿತ್ತು. ಪರಿಸರದ ಜಾನುವಾರುಗಳಿಗೆ, ವನ್ಯಜೀವಿಗಳಿಗೆ ಆಸರೆಯಾಗಿತ್ತು. ಮದಗದ ಕೆಳಭಾಗದಲ್ಲಿರುವ ಕೆಳಾಕಳಿ ಬಯಲಿಗೆ ನೀರು ಮದಗದಿಂದಲೇ ಹರಿಯುತ್ತಿತ್ತು.

ರಸ್ತೆ ನಿರ್ಮಿಸುವಾಗ ಕೂಡ ಮದಗದ ನೀರು ಹರಿದು ಹೋಗುವಂತೆ ಮೋರಿ ಮಾಡಲಾಗಿದೆ. ಹಿಂದೆ ಮಾನವ ಶಕ್ತಿ ಬಳಸಿ ಚರಂಡಿ ಹೂಳೆತ್ತುವುದು ಇನ್ನಿತರ ಕೆಲಸ ನಡೆಯುತ್ತಿದ್ದು, ಮಣ್ಣಿನ ಸವಕಳಿ ಕಡಿಮೆಯಿದ್ದಿದ್ದರಿಂದ ಮದಗಕ್ಕೆ ಹೂಳು ಬಂದರೂ ನೀರಿರುತ್ತಿತ್ತು. ಜೆಸಿಬಿ ಮೂಲಕ ರಸ್ತೆ ದುರಸ್ತಿ ಚರಂಡಿ ಹೂಳೆತ್ತಲು ಆರಂಭಿಸಿದ ನಂತರ ಮದಗ ಅಕ್ಷರಶಃ ಮುಚ್ಚಿದೆ.

ಹಾಳುಬಿದ್ದ ಮದಗ ಹೂಳೆತ್ತಿದರೆ ಮತ್ತೆ ಪರಿಸರದ ಜಲಮಟ್ಟ ವೃದ್ಧಿಸುವ ಜತೆ ಕೃಷಿ ಚಟುವಟಿಕೆಗೂ ಪೂರಕವಾಗಲಿದೆ. ಹಕ್ಲಾಡಿ ಗ್ರಾಮ ಪಂಚಾಯಿತಿ ನರೆಗಾ ಯೋಜನೆಯಲ್ಲಿ ಹೂಳೆತ್ತುವ ಕಾರ್ಯ ಆರಂಭಿಸಿದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದ ಕಾರ್ಮಿಕರಿಗೆ ಕೆಲಸ ಕೊಟ್ಟಂತಾಗುತ್ತದೆ.

ಹಕ್ಲಾಡಿ, ಕೆಳಾಕಳಿ, ಬಂಟ್ವಾಡಿ ಪರಿಸರದ ಸಾಕು ಪ್ರಾಣಿಗಳಿಗೆ ಹಾಗೂ ಮದಗದ ಸುತ್ತ ಕುರುಚಲು ಕಾಡು ಇದ್ದುದರಿಂದ ವನ್ಯಜೀವಿಗಳಿಗೂ ಮದಗ ನೀರುಣಿಸುತ್ತಿತ್ತು. ಕೆಳಭಾಗದ ಭತ್ತದ ಕೃಷಿಗೆ ಮದಗದ ನೀರು ಆಶ್ರಯವಾಗಿದ್ದು, ಕೆಳಾಕಳಿ ಬಯಲಿಗೂ ಮದಗ ನೀರು ಕೊಡುತ್ತಿತ್ತು. ಪ್ರಸಕ್ತ ಮದಗ ಹೂಳಿನಿಂದ ಮುಚ್ಚಿಹೋಗಿದ್ದು,ಮದಗದ ಹೂಳೆತ್ತುವುದರಿಂದ ಅಂತರ್ಜಲ ಮಟ್ಟ ಏರುವುದಲ್ಲದೆ ಪರಿಸರದ ನೀರಿನ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸಾಧ್ಯ. ವಿಶ್ವನಾಥ ಶೆಟ್ಟಿ ಗುಡ್ಡಮ್ಮಾಡಿ, ಸಿಗಡಿ ಕೃಷಿಕ, ಮದಗ ಬಳಿ ನಿವಾಸ, ಬಂಟ್ವಾಡಿ ಗ್ರಾಪಂನ ಯಾವುದಾದರೂ ಯೋಜನೆಯಲ್ಲಿ ಸೇರಿಸಿ, ಮದಗ ಹೂಳೆತ್ತುವ ಪ್ರಯತ್ನ ಮಾಡಲಾಗುತ್ತದೆ. ಒಂದೊಮ್ಮೆ ಈ ಬಾರಿ ಆಗದಿದ್ದರೂ ಮಳೆಗಾಲ ನಂತರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೇರಿಸಿ, ಕೊಡ್ಲುಹಾಡಿ ಮದಗ ಹೂಳೆತ್ತುವ ಕೆಲಸ ಮಾಡಲಾಗುತ್ತದೆ. ಮದಗ ಹೂಳೆತ್ತುವುದರಿಂದ ನೀರಿನ ಮಟ್ಟ ಹೆಚ್ಚುವುದಷ್ಟೇ ಅಲ್ಲ ಪಶುಪಕ್ಷಿ ಪ್ರಾಣಿಗಳಿಗೂ ನೀರಾಶ್ರಯ ಸಿಗಲಿದೆ. ಸುಭಾಸ್ ಶೆಟ್ಟಿ ಹೊಳ್ಮಗೆ, ಉಪಾಧ್ಯಕ್ಷ ಗ್ರಾಮ ಪಂಚಾಯಿತಿ, ಹಕ್ಲಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net