ಮದಗದ ಕೆರೆ ಸುಂದರ... ಅಭಿವೃದ್ಧಿ ದೂರ

Madagad Lake
Published on

ರಟ್ಟಿಹಳ್ಳಿ: ಮಾಯದಂತಹ ಮಳೆ ಬಂತಣ್ಣ... ಜಾನಪದ ಹಾಡಿನ ಹಿನ್ನೆಲೆ ಹೊಂದಿರುವ, ಕೋಡಿ ಬಿದ್ದು ಆಕರ್ಷಕವಾಗಿ ಧುಮ್ಮಿಕ್ಕುವ ಜಲಧಾರೆಯಿಂದ ಪ್ರವಾಸಿಗರನ್ನು ಸೆಳೆಯುವ ಮದಗದ ಕೆರೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುವ ಅವಕಾಶದಿಂದ ವಂಚಿತವಾಗಿದೆ.

ರಟ್ಟಿಹಳ್ಳಿ, ಹಿರೇಕೆರೂರ ಮತ್ತು ಶಿಕಾರಿಪುರ ತಾಲೂಕಿನ ಅಂಚಿನಲ್ಲಿರುವ ಈ ಕೆರೆ ವಿಜಯನಗರ, ಕೆಳದಿ ಅರಸರ, ಬ್ರಿಟಿಷರ ಕಾಲದಲ್ಲಿ ಅಭಿವೃದ್ಧಿ ಹೊಂದಿರುವ ಬಗ್ಗೆ ಇತಿಹಾಸದಿಂದ ತಿಳಿಯಬಹುದಾಗಿದೆ. ೪೮೪ ಎಕರೆ ೨೨ ಗುಂಟೆ ವಿಶಾಲವಾದ ಈ ಕೆರೆ ಸಾವಿರಾರು ಎಕರೆ ಕೃಷಿಗೆ ಜಮೀನಿಗೆ ನೀರಿನ ಆಧಾರವಾಗಿದೆ. ಮದಗದ ಕೆರೆ ತುಂಬಿ ಕೋಡಿ ಬೀಳುವ ಮೂಲಕ ಕುಮದ್ವತಿ ನದಿ ಉಗಮವಾಗುತ್ತದೆ. ನದಿಯ ಸೃಷ್ಟಿಯಾಗುವ ಸ್ಥಳ, ಕೆರೆಯ ಮಡಿಲಲ್ಲಿ ಹಸಿರಾಗಿ ಕಾಣುವ ಸುಂದರ ಗುಡ್ಡ ಬೆಟ್ಟಗಳು, ಭಕ್ತರ ಇಷ್ಟಾರ್ಥ ಕರುಣಿಸುವ ಕೆಂಚಮ್ಮನ ದೇವಸ್ಥಾನ, ಅರಣ್ಯ ಇಲಾಖೆಯ ಸಸ್ಯೋದ್ಯಾನ, ಕಲಾಕೃತಿಗಳು, ಮಕ್ಕಳ ಆಟಿಕೆಗಳು ಹಾಗೂ ಇತರ ವೈಶಿಷ್ಟ್ಯಗಳಿಂದಾಗಿ ಪ್ರೇಕ್ಷಣೀಯ ತಾಣವಾಗಿದೆ.

ಅಭಿವೃದ್ಧಿ ಮರೀಚಿಕೆ: ಪ್ರತಿವರ್ಷ ಮಳೆಗಾಲದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕೆರೆ ದಿವ್ಯ ನಿರ್ಲಕ್ಷ÷್ಯಕ್ಕೆ ಒಳಗಾಗಿದ್ದು, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ವಿಶಾಲವಾದ ಕೆರೆ ಫೆಬ್ರವರಿ ಹೊತ್ತಿಗೆ ಬಹುತೇಕ ಖಾಲಿಯಾಗುತ್ತದೆ. ಅನೇಕ ವರ್ಷಗಳಿಂದ ಹೂಳು ತುಂಬಿರುವುದರಿದ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಕೆರೆಯ ಅಭಿವೃದ್ಧಿ ಜತೆಗೆ ಬೋಟಿಂಗ್ ವ್ಯವಸ್ಥೆ ಮಾಡುವುದರಿಂದ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಬಹುದು.

ಸುರಕ್ಷತಾ ಗೋಡೆ ಅವಶ್ಯ: ಕೆರೆ ಕೋಡಿ ಬಿದ್ದು ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ವೀಕ್ಷಣೆ ಸ್ಥಳದಲ್ಲಿ ಯಾವುದೇ ಸುರಕ್ಷತಾ ವ್ಯವಸ್ಥೆಗಳಿಲ್ಲ. ಈ ಮೊದಲು ಅಳವಡಿಸಿದ್ದ ಗ್ರಿಲ್, ಜಾಲರಿ ಹಾಳಾಗಿವೆ. ಪ್ರವಾಸಿಗರು ಅಪಾಯದ ಅಂಚಿನಲ್ಲಿ ನಿಂತು ಜಲಪಾತ ನೋಡಬೇಕಿದೆ. ಅವಘಡಗಳಾದರೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸುರಕ್ಷತಾ ಗೋಡೆ ನಿರ್ಮಾಣ, ಜಾಲರಿ ಅಳವಡಿಕೆ, ವೀಕ್ಷಣಾ ಗೋಪುರ ನಿರ್ಮಿಸಬೇಕಿದೆ.

ಸಂಪರ್ಕ ರಸ್ತೆ ಡಾಂಬರೀಕರಣ, ಯಾತ್ರಿ ನಿವಾಸ ಅಗತ್ಯ: ಮಾಸೂರು-ಶಿಕಾರಿಪುರ ಹೆದ್ದಾರಿ ಮೂಲಕ ಬಂದು ಸುಮಾರು ನಾಲ್ಕೆದು ಕಿಮೀ ಅರಣ್ಯದ ಮೂಲಕ ಸಾಗಬೇಕಿದೆ. ಇಲ್ಲಿ ಸರಿಯಾದ ರಸ್ತೆ ಇಲ್ಲ. ಕಚ್ಚಾ ರಸ್ತೆಯಾಗಿರುವುದರಿಂದ ಮಳೆಗಾಲದಲ್ಲಿ ಕೆಸರಿನಲ್ಲಿ ವಾಹನಗಳು, ಜನರು ಹೋಗಲು ಪರದಾಡುತ್ತಾರೆ. ರಸ್ತೆ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವುದರಿಂದ ಸುಧಾರಣೆ ಮಾಡಲು ಅಡ್ಡಿಯಾಗಿದೆ. ಈ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲು ಹೋರಾಟ ಸಮಿತಿ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಮದಗ ಮಾಸೂರು ಕೆರೆ ಅಭಿವೃದ್ಧಿ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಬೇಡಿಕೆಗಳು ಭರವಸೆಗಳಾಗಿ ಉಳಿದುಕೊಂಡಿವೆ.

ಕಳೆದ ೨೫ ವರ್ಷಗಳಿಂದ ಐತಿಹಾಸಿಕ ಮದಗದ ಕೆರೆ ಹೂಳೆತ್ತಲು, ಸಂಪರ್ಕ ರಸ್ತೆ ಸುಧಾರಣೆ, ಬೋಟಿಂಗ್ ವ್ಯವಸ್ಥೆ, ಕಿರು ವಿದ್ಯುತ್ ಉತ್ಪಾದನೆ ಘಟಕ, ಯಾತ್ರಿ ನಿವಾಸ, ಸುರಕ್ಷತಾ ಗೋಡೆ ನಿರ್ಮಾಣ ಸೇರಿ ಹಲವು ಸೌಕರ್ಯ ಒದಗಿಸುವಂತೆ ಎಲ್ಲ ಸರ್ಕಾರಗಳಿಗೆ, ಜನಪ್ರತಿನಿನಿಧಿಗಳಿಗೆ ಮನವಿ ಸಲ್ಲಿಸುತ್ತ ಬರಲಾಗಿದೆ. ಸರ್ಕಾರ ಮತ್ತು ಜನಪ್ರತಿನಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಮದಗದ ಕೆರೆ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲು ಹಿನ್ನಡೆಯಾಗಿದೆ. ಈ ತಾಣದ ಅಭಿವೃದ್ಧಿಗೆ ಸಂಸದರು, ಸಚಿವರು, ಶಾಸಕರು ಮನಸು ಮಾಡಬೇಕಿದೆ. | ಡಾ. ನಿಂಗಪ್ಪ ಚಳಗೇರಿ, ಅಧ್ಯಕ್ಷ, ಮದಗ ಮಾಸೂರು ಕೆರೆ ಹೋರಾಟ ಸಮಿತಿ ಹಾವೇರಿ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮದಗ ಮಾಸೂರು ಕೆರೆ ಹೆಸರು ಇಲ್ಲ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಈ ಸ್ಥಳವು ಪ್ರವಾಸಿಗರಿಗೆ ಆಕರ್ಷಿತವಾಗಿದೆ. ಅರಣ್ಯ ಇಲಾಖೆಗೆ ಉಪಯುಕ್ತವಲ್ಲದ ಆಯ್ದ ಭಾಗಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದರೆ ಮುಂದಿನ ದಿನಗಳಲ್ಲಿ ವಿವಿಧ ಯೋಜನೆಗಳಡಿ ಮೂಲಸೌಕರ್ಯ ಕಲ್ಪಿಸಿ, ಪ್ರವಾಸಿ ತಾಣವಾಗಿ ರೂಪಿಸಲಾಗುವುದು. | ಮಧುಗೌಡ ಎಲ್.ಪಿ., ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net