

ಶ್ರೀನಿವಾಸ ಅಣ್ಣಯ್ಯಪ್ಪ ಯಶವಂತಪುರ : ಸಂತಾನ ಫಲ ಇಲ್ಲದವರು ಬಂದು ಹರಕೆ ಮಾಡಿಕೊಂಡರೆ ಜೋಡಿ ಫಲವನ್ನೇ (ಅವಳಿ ಮಕ್ಕಳು) ನೀಡುವ ಕ್ಷೇತ್ರ ಜೋಡಿ ವೀರಭದ್ರೇಶ್ವರ ಸನ್ನಿಧಾನ. ಮಾಗಡಿ ಮುಖ್ಯರಸ್ತೆಯ ಮಾಚೋಹಳ್ಳಿಯಲ್ಲಿರುವ ಪುರಾತನ ಶ್ರೀಜೋಡಿ ವೀರಭದ್ರೇಶ್ವರಸ್ವಾಮಿ ದೇವಾಲಯದಲ್ಲಿ ಬುಧವಾರ (ಫೆ.26) ಅದ್ದೂರಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಚೋಳರ ಕಾಲದ ಐತಿಹಾಸಿಕ ಜೋಡಿ ವೀರಭದ್ರ ದೇವಾಲಯದಲ್ಲಿರುವ 51 ಅಡಿ ಎತ್ತರದ ಶಿವನ ಪ್ರತಿಮೆಯ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸಲಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆಯಿಂದ ತಡರಾತ್ರಿವರೆಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮುಂಜಾನೆ ಗಂಗಾಪೂಜೆಯೊಂದಿಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಗೋಪೂಜೆ, ಸಾಮೂಹಿಕ ಸಂಕಲ್ಪ, ಮಹಾ ರುದ್ರಾಭಿಷೇಕ, ಹೋಮ-ಹವನ, ಪೂರ್ಣಾಹುತಿ, ಮಹಾಮಂಗಳಾರತಿ ನಡೆಯಲಿದೆ. ಉತ್ಸವದ ಅಂಗವಾಗಿ ಜೋಡಿ ವೀರಭದ್ರೇಶ್ವರ ಸ್ವಾಮಿಗೆ ವಿಶಿಷ್ಟ ಫಲಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ವೀರಗಾಸೆ ಪ್ರದರ್ಶನ, ಭರತನಾಟ್ಯ, ನೃತ್ಯ, ಗಾಯನ ಸೇರಿ ಜಾನಪದ ಕಲಾ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 1 ಗಂಟೆಗೆ ವಿಶೇಷವಾಗಿ ಜೋಡಿ ವೀರಭದ್ರಸ್ವಾಮಿ ಹರಕೆಯಿಂದ ಜನಿಸಿದ ಅವಳಿ ಮಕ್ಕಳಿಗೆ ಶಿವಗಂಗೆ ಮಠದ ಶ್ರೀಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಗುರುರಕ್ಷೆಯೊಂದಿಗೆ ಸನ್ಮಾನಿಸಲಿದ್ದಾರೆ. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.
ಶತಮಾನಗಳ ಇತಿಹಾಸ ಹೊಂದಿರುವ ಶಿಥಿಲಾವಸ್ಥೆಯಲ್ಲಿದ್ದ ಪುರಾತನ ಕಲ್ಲು ಮಂಟಪದ ಶ್ರೀಜೋಡಿ ವೀರಭದ್ರೇಶ್ವರಸ್ವಾಮಿಯ ದೇವಸ್ಥಾನವನ್ನು ಪ್ರಧಾನ ಅರ್ಚಕ ಎಂ.ಎಸ್ ರುದ್ರೇಶ್ ನೇತೃತ್ವದಲ್ಲಿ ಗ್ರಾಮಸ್ಥರು, ದೇವರ ಒಕ್ಕಲು ಕುಟುಂಬಗಳು, ಜನಪ್ರತಿನಿಧಿಗಳು ಹಾಗೂ ಸಮಸ್ತ ಸದ್ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡಿದೆ. ದೇವಾಲಯದ ಮೇಲ್ಭಾಗದಲ್ಲಿ 51 ಅಡಿ ಬೃಹತ್ ಶಿವನ ಮೂರ್ತಿ, ದೇಗುಲದ ಮುಂಭಾಗದಲ್ಲಿ ನಂದಿ, ರೇಣುಕಾಚಾರ್ಯರು, ಬಸವಾದಿ ಶರಣರು, ಶಿವ-ಪಾರ್ವತಿ, ನಾಗದೇವತೆಗಳು, ರಂಭಾಪುರಿ ಲಿಂಗೈಕ್ಯ ಶ್ರೀ ಗಂಗಾಧರ ಜಗದ್ಗುರುಗಳು ಮತ್ತು ಸಿದ್ದಗಂಗೆಯ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಕಲಾಕೃತಿಗಳನ್ನು ಸ್ಥಾಪಿಸಲಾಗಿದೆ.
ಒಂದೇ ಗರ್ಭಗುಡಿಯಲ್ಲಿ ಎರಡು ವೀರಭದ್ರ ಮೂರ್ತಿಗಳಿರುವುದರಿಂದ ಜೋಡಿ ವೀರಭದ್ರೇಶ್ವರ ಎಂದು ಪ್ರಸಿದ್ಧಿಯಾಗಿದ್ದು, ನಾಡಿನ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಸಂತಾನ ಫಲ ಇಲ್ಲದವರು ಇಲ್ಲಿಗೆ ಬಂದು ಹರಕೆ ಮಾಡಿಕೊಂಡು ಸಂತಾನ ಫಲ ಪಡೆದಿದ್ದಾರೆ. ಅದರಲ್ಲೂ ಜೋಡಿ ವೀರಭದ್ರ ಜೋಡಿ ಫಲವನ್ನೇ (ಅವಳಿ ಮಕ್ಕಳು) ನೀಡಿದ ಉದಾಹರಣೆಗಳಿವೆ. ಸ್ವತಃ ಪ್ರಧಾನ ಅರ್ಚಕ ಎಂ.ಎಸ್.ರುದ್ರೇಶ್ರಿಗೂ ಅವಳಿ ಗಂಡು ಮಕ್ಕಳು, ಅವರ ತಾತ ರುದ್ರಪ್ಪನವರಿಗೂ ಅವಳಿ ಹೆಣ್ಣು ಮಕ್ಕಳು. ಕ್ಷೇತ್ರದಲ್ಲಿ ಈವರೆಗೂ ನೂರಕ್ಕೂ ಹೆಚ್ಚು ದಂಪತಿಗಳಿಗೆ ಅವಳಿ ಮಕ್ಕಳು ಜನಿಸಿವೆ. ಮೂರು ಅಮಾವಾಸ್ಯೆಗಳು ದೇವಾಲಯದಲ್ಲಿ ಸ್ವಾಮಿಯ ದರ್ಶನ ಪಡೆದು, ಅಭಿಷೇಕದ ತೀರ್ಥವನ್ನು ಹಾಕಿಸಿಕೊಂಡು ಪೂರ್ಣಫಲ ಕಟ್ಟಿ ಹರಕೆ ಅರ್ಪಿಸಿದರೆ, ಸಂತಾನ ಭಾಗ್ಯ, ರೋಗ ರುಜಿನೆಗಳಿಂದ ಮುಕ್ತಿ, ಬದುಕಿನಲ್ಲಿ ಯಶಸ್ಸು, ಸಂಪತ್ತು ಸಹಿತ ಇಷ್ಟಾರ್ಥಗಳು ಈಡೇರುತ್ತೆ ಎಂಬುದು ಭಕ್ತರ ನಂಬಿಕೆ.
ಮಾಚೋಹಳ್ಳಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲು ದಾಸೋಹ ಭವನ, ದೂರದಿಂದ ಬರುವ ಭಕ್ತರಿಗಾಗಿ ವಸತಿ ನಿಲಯ ನಿರ್ಮಾಣವಾಗಬೇಕಿದ್ದು, ಈ ಸತ್ಕಾರ್ಯಗಳಿಗೆ ಭಕ್ತರ ಸಹಕಾರ ಅಗತ್ಯವಿದೆ. ಹೆಚ್ಚಿನ ಮಾಹಿತಿಗೆ ಎಂ.ಎಸ್.ರುದ್ರೇಶ್, ಪ್ರಧಾನ ಅರ್ಚಕರು ದೂ: 9845668024 ಸಂಪರ್ಕಿಸಬಹುದು."ಮದುವೆಯಾಗಿ ಹಲವು ವರ್ಷಗಳು ಮಕ್ಕಳಿರಲಿಲ್ಲ. ಐದಾರು ಬಾರಿ ಸ್ವಾಮಿ ಸನ್ನಿಧಿಯಲ್ಲಿ ಪೂಜಿಸಿದ ಫಲವಾಗಿ ಗಂಡು-ಹೆಣ್ಣು ಅವಳಿ ಮಕ್ಕಳಾಗಿವೆ." -ಡಾ ಸುಧಾಕರ್-ಪುಷ್ಪಲತಾ, ಅಮೃತೂರು, ಕುಣಿಗಲ್ ತಾಲೂಕು