ಮಾಚಹಳ್ಳಿ ಶ್ರೀ ತಿಬ್ಬಾದೇವಿ ಸನ್ನಿಧಿ ಮರು ಪ್ರತಿಷ್ಠಾಪನೆ

oppo_2
oppo_2
Published on

ಮದ್ದೂರು : ದೇವಸ್ಥಾನಗಳು ಭಕ್ತಿ, ಭಾವ ಜಾಗೃತಗೊಳಿಸುವ ತಾಣಗಳಾಗಿವೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ಆತಗೂರು ಹೋಬಳಿ ಮಾಚಹಳ್ಳಿ ಗ್ರಾಮದಲ್ಲಿ ಮಂಗಳವಾರ ಜೀರ್ಣೋದ್ಧಾರಗೊಂಡ ಶ್ರೀ ತಿಬ್ಬಾದೇವಿ ಸನ್ನಿಧಿ ಮರು ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪೂಜೆ, ಧ್ಯಾನ ಮತ್ತು ಧಾರ್ಮಿಕ ಆಚರಣೆಗಳಿಂದ ಅಧ್ಯಾತ್ಮ ಚಿಂತನೆಗಳು ಜಾಗೃತವಾಗಲಿವೆ. ಇದರಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ. ಎಲ್ಲರೂ ಆಚಾರ ,ವಿಚಾರ ಮೈಗೂಡಿಸಿಕೊಂಡರೆ, ದಾನ- ಧರ್ಮ ಮತ್ತು ಪರಂಪರೆಗಳ ಬಗ್ಗೆ ಕಳಕಳಿ ರೂಢಿಸಿಕೊಂಡರೆ ನಾಡಿನಲ್ಲಿ ಶಾಂತಿ ನೆಲೆಸುತ್ತದೆ ಎಂದು ಅವರು ಹೇಳಿದರು.

ನಾವು ಕೈಲಾದ ಮಟ್ಟಿಗೆ ನೊಂದವರಿಗೆ ಸಹಾಯ ಮಾಡಬೇಕು ಆಮೂಲಕ ದೇವರನ್ನು ಕಾಣಬೇಕು.ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸಗಳನ್ನು ಸಮರ್ಪಣೆ ಮಾಡಬೇಕು. ಮುಖ್ಯವಾಗಿ ಗ್ರಾಮಗಳ ಕೆರೆ, ಕಟ್ಟೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕು ಎಂದವರು ಸಲಹೆ ನೀಡಿದರು. ನಾನು ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ದಾಗ ಜನಸಾಮಾನ್ಯರ, ರೈತರ ಅಗತ್ಯಗಳಿಗೆ ಸ್ಪಂದಿಸಿದ್ದೇನೆ. ಈ ಜಿಲ್ಲೆಯ ಜನರು ಹೃದಯವಂತರು. ಸಮಾಜಮುಖಿ ಸೇವೆಗಳಲ್ಲೇ ದೇವರನ್ನು ಕಾಣುವ ಯತ್ನದಲ್ಲಿ ಮುಂದಾಗಬೇಕು ಎಂದು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ವಿವಿಧ ಧಾರ್ಮಿಕ ಕಾರ್ಯ: ಸನ್ನಿಧಿ ಮರು ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಬೆಳಗ್ಗೆ ಗೋಪೂಜೆ, ಮಹಾ ಚಂಡಿಕಾ ಯಾಗ, ಮಹಾ ಕುಂಬಾಭಿಷೇಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದವು ಮಧ್ಯಾಹ್ನ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ವೇದಬ್ರಹ್ಮ ಭಾನುಪ್ರಕಾಶ್ ಶರ್ಮಾ, ಲಕ್ಷ್ಮೀಶ ಶರ್ಮಾ ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದರು. ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಹಿರಿಯ ಉದ್ಯಮಿ ಸಿ.ಟಿ.ಶಂಕರ್, ಮುಖಂಡ ಕೆ.ಎಂ.ರವಿ ಸೇರಿದಂತೆ ಹಲವು ಗಣ್ಯರು ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಟಿ.ಎಂ.ಶ್ರೀನಿವಾಸ, ಕಾರ್ಯದರ್ಶಿ ರಾಮಣ್ಣ, ಸಹ ಕಾರ್ಯದರ್ಶಿ ಟಿ. ಶ್ರೀನಿವಾಸ, ಗೌರವಾಧ್ಯಕ್ಷ ಚನ್ನೇಗೌಡ, ಟ್ರಸ್ಟಿಗಳಾದ ಬಲರಾಮ, ಪ್ರಕಾಶ್, ಮರೀಗೌಡ, ನಾಗಣ್ಣ, ದಾಸೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net