ಮುಖ್ಯವಾಹಿನಿಗೆ ಬರಲು ಶಿಕ್ಷಣ ಅವಶ್ಯ

MKG1
Published on

ಚನ್ನಗಿರಿ: ಅರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಎಲ್ಲರೂ ಶಿಕ್ಷಣವಂತರಾಗಬೇಕು ಎಂದು ಚಿತ್ರದುರ್ಗ ಮಡಿವಾಳ ಸಮಾಜದ ಡಾ.ಬಸವ ಮಾಚಿದೇವ ಶ್ರೀಗಳು ತಿಳಿಸಿದರು.

ತಾಲೂಕಿನ ಬಿಲ್ಲಹಳ್ಳಿ ಗ್ರಾಮದಲ್ಲಿ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘ, ಶಿವಬಸವೇಶ್ವರ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಮನ ಮನೆಗೆ ಮಾಚಿದೇವ ಹಾಗೂ ಶ್ರಾವಣ ಮಾಸದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಶನಿವಾರ ಮಾತನಾಡಿದರು.

ಮಡಿವಾಳ ಸಮಾಜ ಜೀವನೋಪಾಯಕ್ಕಾಗಿ ಕುಲ ಕಸುಬು ನಡೆಸಿಕೊಂಡು ಬರುತ್ತಿದ್ದಾರೆ. ಜತೆಗೆ ಎಲ್ಲ ಸಮಾಜದವರ ಜತೆ ಸಹೋದರ ಸಂಬಂಧ ಬೆಳೆಸಿಕೊಂಡು ಪ್ರೀತಿ, ಸ್ನೇಹ ಗಳಿಸಿದ್ದಾರೆ. ಆದರೆ, ಸರ್ಕಾರದ ಗಮನ ಸೆಳೆಯಬೇಕಾದರೆ ಸಮಾಜ ಬಾಂಧವರು ಮೊದಲು ಸಂಘಟಿತರಾಗಬೇಕು ಎಂದರು.

12ನೇ ಶತಮಾನದಲ್ಲಿ ಮಾಚಿದೇವ, ಬಸವಣ್ಣನವರ ಆಪ್ತರಲ್ಲಿ ಒಬ್ಬರಾದ ಶರಣರಾಗಿದ್ದರು. ಮಾನುಕುಲದ ಉದ್ಧಾರಕ್ಕಾಗಿ, ಸಮ ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣನವರ ಜತೆ ಸೇವೆ ಮಾಡಿದರು, ಕಲ್ಯಾಣ ರಾಜ್ಯದಲ್ಲಿ ಶರಣರ ನಾಶಕ್ಕಾಗಿ ಹೋರಾಟಗಳು ನಡೆಯುವಂತಹ ಸಮಯದಲ್ಲಿ ಶರಣರ ವಚನ ಉಳಿಸಿ ಇಂದಿಗೂ ಜೀವಂತವಾಗಿ ಇರುವಂತೆ ಮಾಡಿದವರಲ್ಲಿ ಮಾಚಿದೇವ ಪ್ರಮುಖರು ಎಂದರು.

ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿ, ಶೋಷಿತರ ನೋವಿಗೆ ಧ್ವನಿಯಾಗಿ ಬಸವಣ್ಣನವರು ಸಮ ಸಮಾಜ ಒಗ್ಗೂಡಿಸಿ ಲಿಂಗದೀಕ್ಷೆ ನೀಡಿದರು. ಇಲ್ಲದಿದ್ದರೆ ಇಂದಿಗೂ ಮೇಲ್ವರ್ಗದವರ ದಾಸ್ಯದಲ್ಲಿ ಇರಬೇಕಾಗಿತ್ತು ಎಂದರು.

ತುಮ್‌ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಮಾತನಾಡಿ, 12ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂದು ತಿಳಿದ ಶರಣರೆಲ್ಲರೂ ದಾಸೋಹ ಹಾಗೂ ಕಾಯಕ ಕೆಲಸಕ್ಕೆ ಅದ್ಯತೆ ನೀಡಿದ್ದರು. ಸಮ ಸಮಾಜ ಕಟ್ಟಲು ಎಲ್ಲ ಜಾತಿ ಧರ್ಮ ಬದಿಗಿಟ್ಟು ಎಲ್ಲರೂ ಲಿಂಗ ಧರಿಸಿ ಎಲ್ಲರೂ ಒಂದೇ ಎಂಬ ಭಾವನೆ ಬರುವಂತೆ ಮಾಡಿದರು ಎಂದರು.

ಮಡಿವಾಳ ಸಮಾಜದ ಚನ್ನಗಿರಿ ನಗರ ಘಟಕದ ಅಧ್ಯಕ್ಷ ಜಯಣ್ಣ, ಗೌರವಾಧ್ಯಕ್ಷ ದತ್ತಪ್ಪ, ತಾಪಂ ಮಾಜಿ ಅಧ್ಯಕ್ಷೆ ಪುಷ್ಪ್ಪಾವತಿ, ಬುಳಸಾಗರ ಮಲ್ಲೇಶಪ್ಪ, ಶಿವಮೂರ್ತಿ, ಪುಟ್ಟಲಕ್ಷ್ಮಮ್ಮ, ಲೋಕೇಶ್, ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net