ಮಾಚಿದೇವ ಜಯಂತಿ ಈ ಬಾರಿ ಸರಳ

CTD 27 NEWS DC-01
Published on

ಚಿತ್ರದುರ್ಗ: ಹನ್ನೇರಡನೆ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಕೈ ಜೋಡಿಸಿದ ಹಾಗೂ ಕಾಯಕ ನಿಷ್ಠೆ ಬೋಧಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಫೆ.1ರಂದು ಸರಳವಾಗಿ ಆಚರಿಸುವುದಾಗಿ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.

ಡಿಸಿ ಕಚೇರಿಯಲ್ಲಿ ಶುಕ್ರವಾರ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಮಡಿವಾಳ ಸಮಾಜದ ಮುಖಂಡರ ಸಮ್ಮತಿಯಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಗುವುದು ಎಂದರು.

ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ವಚನಗಳ ಗೀತ ಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ ಮಾತನಾಡಿ, ಈ ಬಾರಿ ಸಮಯದ ಅಭಾವ ಮತ್ತು ಕೆಲ ಕಾರಣಗಳಿಂದ ಸರಳವಾಗಿ ಹಾಗೂ ಮುಂದಿನ ಬಾರಿ ವೈಭವದಿಂದ ಜಯಂತಿ ಆಚರಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯದರ್ಶಿ ಕೆ.ಆರ್.ಮಂಜುನಾಥ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬಸವಾದಿ ಶರಣರ ಜೀವನ ಚರಿತ್ರೆಗಳ ಕುರಿತು 30 ನಿಮಿಷಗಳ ವಿಶೇಷ ಉಪನ್ಯಾಸ ನೀಡುವ ವ್ಯವಸ್ಥೆ ಮಾಡಬೇಕು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕೆಂದು ಕೋರಿದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ಕೆ ಮಲ್ಲಿಕಾರ್ಜುನ, ನಗರ ಪೊಲೀಸ್ ಠಾಣಾಧಿಕಾರಿ ತಿಪ್ಪೇಸ್ವಾಮಿ, ಮುಖಂಡರಾದ ಸೊಸೈಟಿ ಬಿ.ಲಕ್ಷ್ಮಣ್, ಶಿವಲಿಂಗಪ್ಪ, ಟಿ.ಪರಶುರಾಮ್, ನಾಗರಾಜ್, ಎಚ್.ರಂಗಸ್ವಾಮಿ, ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net