

ಪಾಂಡವಪುರ: ಮಡಿವಾಳ ಮಾಚಿದೇವರು ಸಮಾಜದ ಕೊಳೆ ತೊಳೆದು ಮಡಿ ಮಾಡುವ ಕೆಲಸವನ್ನು 12ನೇ ಶತಮಾನದಲ್ಲೇ ಮಾಡಿದ್ದರು ಎಂದು ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಮಡಿವಾಳ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಗ್ರಾಪಂ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿದ್ದ ಸಮಾಜದ ಅಂಕು ಡೊಂಕುಗಳನ್ನು ಬದಲಾಯಿಸಲು ಶ್ರಮಿಸಿದ ಮಾಚಿದೇವರನ್ನು ಈಗಲೂ ಸ್ಮರಿಸುತ್ತೇವೆ. ಸಮಾಜದ ಸುಧಾರಣೆಗಾಗಿ ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಮತ್ತು ಅವರ ಆದರ್ಶದ ನಡೆಗಳನ್ನು ಸ್ಮರಿಸಬೇಕಿದೆ. ಸಮಾಜದ ಏಳಿಗೆಗೆ ದುಡಿದ ಮಹನೀಯರನ್ನು ಸ್ಮರಿಸಬೇಕು ಎಂದರು.
ಯಾವುದೇ ಒಂದು ಹಿಂದುಳಿದ ಸಮಾಜ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲವಾದರೆ ಅಭಿವೃದ್ಧಿ ಸಾಧ್ಯ. ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದು ತಮ್ಮ ಹಕ್ಕುಗಳಿಗೆ ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಗಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.
ಕನ್ನಡಸೇನೆ ಜಿಲ್ಲಾ ಉಪಾಧ್ಯಕ್ಷ ಮಂಡಿಬೆಟ್ಟಹಳ್ಳಿ ಮಂಜುನಾಥ್ ಮಾತನಾಡಿ, ತಾಲೂಕು ಕೇಂದ್ರದಲ್ಲಿ ಹಿಂದುಳಿದ ಮತ್ತು ಸಣ್ಣ ಸಮುದಾಯಗಳಿಗೆ ಸಮುದಾಯ ಭವನಗಳ ಅವಶ್ಯಕತೆ ಇದೆ. ಒಂದು ಸಮುದಾಯ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇಲ್ಲವಾದರೆ ಸಮಾಜದಲ್ಲಿ ಎಲ್ಲರಂತೆ ಬದುಕಲು ಸಾಧ್ಯವಿಲ್ಲ ಎಂದರು.
ಮಡಿವಾಳ ಸಮುದಾಯದ ಅಧ್ಯಕ್ಷ ಸಿ.ನಂಜಪ್ಪ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದನ್ನು ನಿಲ್ಲಿಸಬೇಡಿ. ಕರ್ನಾಟಕ ಹೊರತುಪಡಿಸಿದರೆ ಬಹಳಷ್ಟು ರಾಜ್ಯಗಳಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಸೇರಿಸದ ಪರಿಣಾಮ ವಿದ್ಯಾಭ್ಯಾಸ ಕುಂಠಿತವಾಗಿದೆ. ರಾಜಕೀಯವಾಗಿ ಪ್ರಾತಿನಿಧ್ಯ ಸಿಗದಿದ್ದರೂ ಪರವಾಗಿಲ್ಲ. ಪರಿಶಿಷ್ಟ ಜಾತಿಯ ಕೋಟಾದಲ್ಲಿ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಸಿಗುವಂತಾಗಬೇಕು ಎಂದು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ಸಾಹಿತಿ ಚಂದ್ರಶೇಖರಯ್ಯ, ಲೋಹಿತ್, ಬಳಘಟ್ಟ ಅಶೋಕ್, ಚಿಕ್ಕಮರಳಿ ನವೀನ್, ಚೇತು ಇತರರು ಇದ್ದರು.