

ಮಾನ್ವಿ: ಒತ್ತಡದ ಬದುಕಿನಲ್ಲಿ ಮನಸ್ಸು ನಿಯಂತ್ರಣಕ್ಕೆ ತರಲು ಮತ್ತು ದೈಹಿಕವಾಗಿ ಸದೃಢರಾಗಲು ಯೋಗಾಭ್ಯಾಸ ಅವಶ್ಯ ಎಂದು ಕಲ್ಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ.ಜೀವನೇಶ್ವರಯ್ಯ ಹೇಳಿದರು.
ಪಟ್ಟಣದ ಕೆಪಿಎಸ್‌ವಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಕೆಪಿಎಸ್‌ವಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ, ಲಯನ್ಸ್ ಕ್ಲಬ್, ಭಾರತ ವಿಕಾಸ್ ಪರಿಷತ್, ಪತಂಜಲಿ ಮಹಿಳಾ ಯೋಗ ಸಮಿತಿ, ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತಂಜಲಿ ಮಹರ್ಷಿಗಳು ಉತ್ತಮ ಆರೋಗ್ಯಕ್ಕಾಗಿ ಯೋಗದ ಸೂತ್ರಗಳನ್ನು ಹಾಗೂ ಯೋಗದ ಆಸನಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಪತಂಜಲಿ ಯೋಗ ಶಿಕ್ಷಕಿ ಅನುರಾಧ ಪಾಟೀಲ್ ಮಹಿಳೆಯರಿಗೆ ಯೋಗಾಸನಗಳ ಬಗ್ಗೆ ತಿಳಿಸಿಕೊಟ್ಟರು. ಉಪ ಪ್ರಾಚಾರ್ಯೆ ಡಾ. ಸುಮಂಗಲಾ ಹಿರೇಮಠ, ಹಿರಿಯ ವಕೀಲ ಗುಮ್ಮ ಬಸವರಾಜ, ಲಯನ್ಸ್ ಕ್ಲಬ್ ಮಾನವಿ ಹಾಗೂ ಭಾರತ ವಿಕಾಸ್ ಪರಿಷತ್ ತಾಲೂಕು ಅಧ್ಯಕ್ಷ ಚನ್ನಬಸವರಾಜ, ಆಯುರ್ವೇದಿಕ್ ಕಾಲೇಜಿನ ಆಡಳಿತಾಧಿಕಾರಿ ಮತ್ತು ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಚ್.ಎಂ. ಉಮಾಶಂಕರ, ಸೂಗಪ್ಪಗೌಡ ಹರವಿ ಇತರರಿದ್ದರು.