ತಮ್ಮ ಕೊಠಡಿ ಸೋರುತ್ತಿದ್ದರೂ ಶಾಲೆ ಕಟ್ಟಿಸಿದ್ದ ಶ್ರೀಗಳು: ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅಭಿಮತ

2
ಮಾಗಡಿ ತಾಲೂಕಿನ ಕಂಚುಗಲ್ಲು ಬಂಡೇಮಠದಲ್ಲಿ ಭಾನುವಾರ ನಡೆದ ಶಿವರುದ್ರ ಸ್ವಾಮೀಜಿ ಅವರ ಸಂಸ್ಮರಣೆ, ಬಸವಲಿಂಗ ಸ್ವಾಮೀಜಿ ಅವರ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೊದಲಾದವರು ಇದ್ದರು.
Published on

ಮಾಗಡಿ: ಲಿಂಗೈಕ್ಯ ಶ್ರೀ ಶಿವರುದ್ರ ಸ್ವಾಮೀಜಿ ನನ್ನ ಬದುಕಿಗೆ ಬೆಳಕು ನೀಡಿದವರು. ಬತ್ತಿ ಮತ್ತು ಎಣ್ಣೆಯಿಂದ ಸುಟ್ಟು ಭಕ್ತರಿಗೂ ಬೆಳಕಾಗಿದ್ದವರು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ತಾಲೂಕಿನ ಕಂಚುಗಲ್ಲು ಬಂಡೇಮಠದಲ್ಲಿ ಭಾನುವಾರ ಏರ್ಪಾಡಾಗಿದ್ದ ಶ್ರೀ ಶಿವರುದ್ರ ಸ್ವಾಮೀಜಿ ಸಂಸ್ಮರಣೆ, ಶ್ರೀ ಬಸವಲಿಂಗ ಸ್ವಾಮೀಜಿ ಅವರ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿದ್ಧಗಂಗಾ ಮಠ ಎಂದರೆ ಸಮರ್ಪಣೆ ಮನೋಭಾವ, ಭಕ್ತಿ, ಸೇವೆ, ತ್ಯಾಗ ಎಂದೇ ಪ್ರತಿತಿ. ಶಿವರುದ್ರ ಶ್ರೀಗಳು 1963ರಲ್ಲಿ ಶಾಲೆ ಆರಂಭಿಸಿ ಈ ಭಾಗದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದ ಫಲದಿಂದ ಲಾಂತರ ಮಂದಿ ಉನ್ನತ ಜೀವನ ಸಾಗಿಸುತ್ತಿದ್ದಾರೆ. ಶ್ರೀಗಳ ಮಲಗುವ ಕೋಣೆ ಸೋರುತ್ತಿದ್ದರೂ ಶಾಲೆಯ ಮಕ್ಕಳಿಗೆ ಆರ್​ಸಿಸಿ ಕಟ್ಟಡ ನಿಮಿರ್ಸಿ ಶಿಕ್ಷಣಕ್ಕೆ ಒತ್ತು ನೀಡಿದ್ದರು. ಬಡವ, ಶ್ರೀಮಂತರೆಲ್ಲರನ್ನೂ ಒಂದೇ ರೀತಿ ಕಾಣುತ್ತಿದ್ದರು. ವೈಯಕ್ತಿಕವಾಗಿ ಏನನ್ನೂ ಬಯಸದೆ ಭಕ್ತರ ಬಗ್ಗೆ ಹೆಚ್ಚು ಪ್ರೀತಿ ಹೊಂದಿದ್ದರು ಎಂದು ಸ್ಮರಿಸಿದರು.


ಬಂಡೇಮಂಠದ ಶ್ರೀ ಬಸವಲಿಂಗ ಸ್ವಾಮೀಜಿ ಸಹ 25 ವರ್ಷದಲ್ಲಿ ಉತ್ತಮ ಸಾಧನೆ ಮಾಡಿ, ಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಸಾವಿರಾರು ಬಡಮಕ್ಕಳಿಗೆ ಶಿಕ್ಷಣ, ದಾಸೋಹ, ವಸತಿ ನೀಡುತ್ತಾ ಶ್ರೀ ಶಿವರುದ್ರ ಸ್ವಾಮೀಜಿ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ. ಶ್ರೀಮಠದಲ್ಲಿ ಭಕ್ತಿಯ ದೀಪ ನಿರಂತರವಾಗಿ ಬೆಳಗಲಿ. ಶ್ರೀಗಳು ಸುವರ್ಣ ಮಹೋತ್ಸವ ಆಚರಿಸಲಿ ಎಂದು ಹಾರೈಸಿದರು.

10 ಮಂದಿಯಾದರೂ ಆಯ್ಕೆಯಾಗಲಿ: ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ದೊಡ್ಡ ಸಮುದಾಯ ಹೊಂದಿರುವ ವೀರಶೈವ, ಲಿಂಗಾಯತ ಸಮಾಜದ ಕನಿಷ್ಠ 10 ಮಂದಿಯಾದರೂ ಆಯ್ಕೆಯಾಗಬೇಕು. ಬಿ.ಎಸ್​.ಪುಟ್ಟರಾಜು ಮತ್ತು ಗಂಗಾಂಬಿಕೆ ಬಿ. ಮಲ್ಲಿಕಾರ್ಜುನ್​ ಅವರಿಗೆ ಪಕ್ಷದಲ್ಲಿ ಉತ್ತಮ ಅವಕಾಶಗಳು ಲಭಿಸಲಿ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾರೈಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀ ಶಿವರುದ್ರ ಸ್ವಾಮೀಜಿ ಅವರು ಕನಕಪುರ, ಸಿದ್ಧಗಂಗಾ ಮಠಗಳಲ್ಲಿ ಇರುತ್ತಿದ್ದರು, ಅವರು ಮಾತೃವಾತ್ಸಲ್ಯ, ಹೃದಯ ಶ್ರೀಮಂತಿಕೆಯುಳ್ಳ ಕರುಣಾಮಯಿಯಾಗಿದ್ದರು. ಶ್ರೀ ಬಸವಲಿಂಗ ಸ್ವಾಮೀಜಿ ಅವರೂ ಕೂಡ ಎಲ್ಲ ಜನರ ಪ್ರೀತಿ ವಿಶ್ವಾಸ ಗಳಿಸಿ ಮಠವನ್ನು ಸಮರ್ಥವಾಗಿ ಬೆಳಗಿಸಿಕೊಂಡು ಸಾಗುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ಸೇವಾ ಕೈಂಕರ್ಯಗಳಿಗೆ ಒತ್ತು ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸೇವೆ ಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು ಎಂದು ಹೇಳಿದರು.


ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಿದ್ಧಗಂಗೆ, ಸುತ್ತೂರು ಮತ್ತು ಸಿರಿಗೆರೆ ಮಠಗಳು ಶಿಕ್ಷಣ, ಆರೋಗ್ಯ, ದಾಸೋಹ ನೀಡಿ ನಾಡಿನ ಲಾಂತರ ಮಂದಿಗೆ ದಾರಿದೀಪವಾಗಿವೆ, ವೀರಶೈವ&ಲಿಂಗಾಯಿತ ಸಮಾಜ ಒಗ್ಗಟ್ಟಾಗಿರಬೇಕು, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಮುಂದಿನ ಚುನಾವಣೆಯಲ್ಲಿ ಸಮಾಜದವರಿಗೆ ಮತ ನೀಡಿ ನಮ್ಮ ಜನಾಂಗದವರು ಮುಖ್ಯಮಂತ್ರಿಯಾಗುವಂತೆ ಶ್ರಮಿಸಬೇಕು ಎಂದರು.

ಒಳಪಂಗಡ ಬಿಟ್ಟು ಒಂದಾಗಿ: ನಿಜಲಿಂಗಪ್ಪ, ವೀರೇಂದ್ರ ಪಾಟೀಲ್​, ಬೊಮ್ಮಾಯಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ವೀರಶೈವ&ಲಿಂಗಾಯಿತರು ಹೆಚ್ಚಿದ್ದರೂ ಒಳಪಂಗಡಗಳ ರೂಪದಲ್ಲಿ ಛಿದ್ರ, ಛಿದ್ರವಾಗಿ ಮಾಡಲಾಗುತ್ತಿದೆ. ನಾವು ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಣದ ಕೈಗಳು ಹೀಗೆ ಮಾಡುತ್ತಿವೆ. ಇನ್ನಾದರೂ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದರು.
ಶ್ರೀಮಠದಲ್ಲಿ ಗೆಸ್ಟ್​ ಹೌಸ್​ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಭಕ್ತರಿಗೆ ಮಠದ ಮಹತ್ವ ತಿಳಿಸಿದ್ದೇನೆ: ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಕಳೆದ 25 ವರ್ಷಗಳಿಂದ ಶ್ರೀಮಠದ ಅಭಿವೃದ್ಧಿಗೆ ಶ್ರಮಿಸಿ, ಧಾಮಿರ್ಕ ಆಚರಣೆಗಳಿಗೆ ಒತ್ತು ನೀಡಿದ್ದೇನೆ. ಹಿಂದಿನ ಶ್ರೀಗಳ ಆಶೀರ್ವಾದ, ಸಹಕಾರದಿಂದ ಮಠ ಎಂದರೇನು ಎಂಬುದನ್ನು ಭಕ್ತರಿಗೆ ತಿಳಿಸಿಕೊಟ್ಟಿದ್ದೇನೆ. ಲಿಂಗೈಕ್ಯರಾಗಿದ್ದರೂ ಶ್ರೀ ಶಿವರುದ್ರ ಸ್ವಾಮೀಜಿ ಅವರು ಇನ್ನೂ ನಮ್ಮ ನಡುವೆ ಜೀವಂತವಾಗಿದ್ದಾರೆ ಎಂದರು.
ರಜತ ಮಹೋತ್ಸವ ಆಚರಣೆಯಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಎಲ್ಲ ಹರಗುರು&ಚರಮೂತಿರ್ಗಳ ಆಶೀರ್ವಾದದಿಂದಾಗಿ ಕಾರ್ಯಕ್ರಮ ಉತ್ತಮವಾಗಿ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಿವಬಸವಶ್ರೀ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ದಿವ್ಯಾ ಆಲೂರು ಕಾರ್ಯಕ್ರಮ ನಿರೂಪಿಸಿದರು. ಗದ್ದುಗೆ ಮಠದ ಶ್ರೀ ಮಹಂತ ಸ್ವಾಮೀಜಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಮಾಜಿ ಸಚಿವ ಎಂ.ಬಿ.ಪಾಟೀಲ್​, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಸ್​. ಪರಮಶಿವಯ್ಯ, ಶಾಸಕರಾದ ಶ್ರೀನಿವಾಸಮೂತಿರ್, ಎಂ. ಕೃಷ್ಣಪ್ಪ, ಮಾಜಿ ಶಾಸಕರಾದ ಎಂ.ವಿ.ನಾಗರಾಜು, ಎಚ್​.ಸಿ. ಬಾಲಕೃಷ್ಣ, ನಟ ದೊಡ್ಡಣ್ಣ, ಬಮುಲ್​ ಅಧ್ಯಕ್ಷ ನರಸಿಂಹಮೂತಿರ್, ಎಂಎಲ್​ಸಿಗಳಾದ ಎಸ್​.ರವಿ, ಆ.ದೇವೇಗೌಡ, ಮಾಜಿ ಮೇಯರ್​ ಗಂಗಾಂಬಿಕೆ, ಮಾಜಿ ಉಪಮಹಾಪೌರ ಬಿ.ಎಸ್​.ಪುಟ್ಟರಾಜು, ಬಿಎಂಟಿಸಿ ನಿರ್ದೆಶಕ ಕೆ.ಪಿ. ಬೃಂಗೇಶ್​, ವೀರಶೈವ ಮಹಾಸಭಾ ಅಧ್ಯಕ್ಷ ಶಿವರುದ್ರಯ್ಯ ಇತರರು ಇದ್ದರು.

ಸರ್ಕಾರಗಳು ಮಾಡದಂಥ ಕೆಲಸಗಳನ್ನು ಮಠಗಳು ಮಾಡುತ್ತಿವೆ. ಸಿದ್ಧಗಂಗೆ, ಸುತ್ತೂರು ಮಠಗಳಲ್ಲಿ ವಿದ್ಯಾಬ್ಯಾಸ ಮಾಡಿದವರು ದೇಶ&ವಿದೇಶಗಳಲ್ಲಿ ಇದ್ದಾರೆ. ಕೋವಿಡ್​ ವೇಳೆ ಮೃತಪಟ್ಟ ಮಕ್ಕಳ ಶಿಕ್ಷಣಕ್ಕೆ ಸುತ್ತೂರು ಮಠದ ಶ್ರೀಗಳ ಸೇವೆ ಅನನ್ಯ.

| ಎಸ್​.ಟಿ.ಸೋಮಶೇಖರ್​ ಸಚಿವ

ಖಾದಿ, ಖಾಕಿಗಳಿಗೆ ಇರುವ ಮರ್ಯಾದೆಯನ್ನು ಮಾಧ್ಯಮದವರು ಕಳೆದಿದ್ದಾರೆ. ಖಾವಿಗಳಿಗೆ ಸ್ವಲ್ಪ ಮರ್ಯಾದೆ ಇದೆ. ಸಮಾಜದ ಜನರನ್ನು ನಿಯಂತ್ರಿಸಿ ಬದಲಾಯಿಸುವಲ್ಲಿ ಮಠಗಳ ಪಾತ್ರ ಹಿರಿದಾದುದು. ಮನುಷ್ಯ ಹುಟ್ಟು&ಸಾವಿನ ನಡುವೆ ಶಾಶ್ವತ ಕೆಲಸ ಮಾಡಬೇಕು. ದುಡಿದ ಹಣದಲ್ಲಿ ಶೇ.10ನ್ನು ಮಠಗಳಿಗೆ ಕೊಡಬೇಕು. ಮಠಗಳು ಸಂಸತಿ, ಸಂಸ್ಕಾರ ನೀಡುತ್ತವೆ. ನಾಡಿನಲ್ಲಿ ಜಾತ್ಯತಿತ ಮನೋಭಾವ ಬೆಳೆಸಿಕೊಂಡು ಮಾರ್ಗದರ್ಶನ ನೀಡುತ್ತವೆ.

| ಡಿ.ಕೆ. ಶಿವಕುಮಾರ್​, ಕೆಪಿಸಿಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net