ಮಾದರಿಯಾಗುತ್ತಿದೆ ‘ಮಾ ಕೇರ್ ಸೆಂಟರ್’: ಶಿಕ್ಷಣ ಸಂಸ್ಥೆಗಳ ಆವರಣದೊಳಗೆ ಲಭ್ಯವಾಗಲಿದೆ : ಶೈಕ್ಷಣಿಕ ಪರಿಕರ, ಲಘು ಆಹಾರ

New Project (6)
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಶಿಕ್ಷಣ ಸಂಸ್ಥೆಗಳ ಆವರಣದೊಳಗೇ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೈಕ್ಷಣಿಕ ಪರಿಕರ, ಲಘು ಆಹಾರ ಸಾಮಗ್ರಿ ಲಭ್ಯವಾಗಿಸುವಂತೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಕುಟುಂಬಶ್ರೀ ಜಂಟಿಯಾಗಿ ಜಾರಿಗೆ ತಂದಿರುವ ‘ಮಾ ಕೇರ್ ಸೆಂಟರ್’ ಮಾದರಿಯಾಗುತ್ತಿದೆ.

ಬೆಳಗ್ಗೆ ಮನೆಯಿಂದ ಹೊರಡುವ ವಿದ್ಯಾರ್ಥಿಗಳು ನಾನಾ ನೆಪವೊಡ್ಡಿ ಪೇಟೆಯಲ್ಲಿ ಸುತ್ತಾಡುತ್ತಿರುವ ಸನ್ನಿವೇಶ ಹೆಚ್ಚಾಗುತ್ತಿದೆ. ಮಧ್ಯಾಹ್ನದ ಭೋಜನ ವಿರಾಮ ವೇಳೆಯಲ್ಲೂ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪರಿಕರ ಅಥವಾ ಇತರ ಲಘು ಆಹಾರ ಸಾಮಗ್ರಿ ಖರೀದಿ ನೆಪದಲ್ಲಿ ಶಾಲೆ ಆವರಣದಿಂದ ಹೊರಗಿರುವ ಪೇಟೆಗೆ ತೆರಳಿ ವ್ಯಾಪಾರಿ ಸಂಸ್ಥೆ ಎದುರು ಸುತ್ತಾಡುತ್ತಿರುವುದರಿಂದ ಅವರನ್ನು ನಿಯಂತ್ರಿಸುವುದು ಕೆಲ ಶಾಲಾ ಶಿಕ್ಷಕರಿಗೆ ಹಾಗೂ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಪ್ರಸಕ್ತ ಎಳೆಯ ಮಕ್ಕಳನ್ನು ಕೇಂದ್ರೀಕರಿಸಿ ಅವರನ್ನು ಮಾದಕ ದ್ರವ್ಯಗಳ ದಾಸರನ್ನಾಗಿಸಲು ಕೆಲವರು ಸಂಚು ಹೂಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗೆ ಹೋಗಿ ಹಿಂತಿರುಗುವವರೆಗೂ ಪಾಲಕರನ್ನು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಮಕ್ಕಳು ಪೇಟೆಯಿಂದ ಖರೀದಿಸುವ ಕಳಪೆ ಆಹಾರ ಸಾಮಗ್ರಿ ಸೇವಿಸುತ್ತಿರುವುದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇವೆಲ್ಲವನ್ನೂ ತಪ್ಪಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಾ ಕೇರ್ ಸೆಂಟರ್ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಇದಕ್ಕೆ ಕುಟುಂಬಶ್ರೀ ಸಹಕಾರ ಪಡೆದುಕೊಂಡಿದೆ.

ಪೌಷ್ಟಿಕ ಆಹಾರ ಪೂರೈಕೆ

ಶಾಲಾ ಆವರಣದೊಳಗೆ ಕಾರ್ಯನಿರ್ವಹಿಸಲಿರುವ ಮಾ ಕೇರ್ ಸೆಂಟರ್‌ಗಳು ಪೌಷ್ಟಿಕ ತಿನಿಸುಗಳನ್ನೇ ಪೂರೈಸಲಿವೆ. ಲಘು ಆಹಾರದ ಜತೆಗೆ ಶೈಕ್ಷಣಿಕ ಸಾಮಗ್ರಿಗಳು, ಬಾಲಕಿಯರಿಗಾಗಿ ನ್ಯಾಪ್‌ಕಿನ್‌ಗಳಂತಹ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಆ ಮೂಲಕ ಶಾಲೆಯಿಂದ ಹೊರಹೋಗಿ ಮಕ್ಕಳ ಅನಗತ್ಯ ಸುತ್ತಾಟ, ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳ ಸೇವೆನೆ, ಮಾದಕತೆ ಬೆರೆತ ಸಿಹಿತಿನಿಸುಗಳಿಗಾಗಿ ಸುತ್ತಾಟ ಇವೆಲ್ಲವೂ ತಪ್ಪಿಸಲು ಸಾಧ್ಯವಾಗಲಿದೆ ಎಂಬುದು ಪಾಲಕರ ಅಭಿಪ್ರಾಯ.

ಮಾರುಕಟ್ಟೆಗಿಂತ ಕನಿಷ್ಠ ಬೆಲೆ

ಬೆಳಗ್ಗೆ 7.30 ರಿಂದ ಸಂಜೆ 6.30ರವರೆಗೆ ಕಾರ್ಯನಿರ್ವಹಿಸುವ ಈ ಕೇಂದ್ರಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಸಾಮಗ್ರಿ ಒದಗಿಸಿಕೊಡಲಿವೆ. ಕುಟುಂಬಶ್ರೀ ನೇತೃತ್ವದಲ್ಲಿ 2023-24ರ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ‘ಮಾ ಕೇರ್’ ಕೇಂದ್ರವನ್ನು ಆರಂಭಿಸಲಾಗಿದೆ. ಯೋಜನೆಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಿಸ್ತರಿಸಲು ಕುಟುಂಬಶ್ರೀ ಮಿಷನ್ ಮತ್ತು ಶಿಕ್ಷಣ ಇಲಾಖೆ ಯೋಜನೆ ಹಮ್ಮಿಕೊಂಡಿದೆ. ಪ್ರಸಕ್ತ ಕಾಸರಗೋಡು ಜಿಲ್ಲೆಯ 16 ಶಾಲೆಗಳಲ್ಲಿ ಮಾ ಕೇರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜುಲೈನಲ್ಲಿ ಹೈಯರ್ ಸೆಕೆಂಡರಿ ಮತ್ತು ಹೈಸ್ಕೂಲ್ ಶಾಲೆಗಳಲ್ಲಿ ಈ ಯೋಜನೆ ಪ್ರಾರಂಭಿಸುವುದು ಇದರ ಉದ್ದೇಶ.

ಶಿಕ್ಷಣ ಕೇಂದ್ರ ವಠಾರದಲ್ಲಿ ಕುಟುಂಬಶ್ರೀ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ‘ಮಾ ಕೇರ್’ ಸೆಂಟರ್ ಆರಂಭಿಸುವ ಮೂಲಕ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪರಿಕರಗಳು ಹಾಗೂ ಲಘು ಆಹಾರ ವಸ್ತುಗಳಿಗಾಗಿ ಪೇಟೆ ಸುತ್ತಾಡುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಜತೆಗೆ ಆರೋಗ್ಯಕ್ಕೆ ಹಾನಿಕಾರಕ ತಿನಿಸುಗಳ ಖರೀದಿ, ಮಾದಕ ಲೇಪನ ಹೊಂದಿದ ಸಿಹಿಪದಾರ್ಥಗಳ ಖರೀದಿಗೂ ಒಂದಷ್ಟು ಕಡಿವಾಣ ಸಾಧ್ಯವಾಗಲಿದೆ. ಕೆ.ರತೀಶ್ ಕುಮಾರ್, ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಸಂಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net