ತುಳು ಸಾಹಿತ್ಯದಲ್ಲಿ ಸಂಸ್ಕೃತಿಯ ಅನಾವರಣ ‘ಲೋಕಗೆಂದಿನ ಗಾಂಧಿಯೆರ್’ ಪುಸ್ತಕ ಬಿಡುಗಡೆಗೊಳಿಸಿ ಎಂ.ವೀರಪ್ಪ ಮೊಲಿ ಹೇಳಿಕೆ

Mng-oct4-tulu bhavana
Published on

ಮಂಗಳೂರು: ತುಳು ಸಾಹಿತ್ಯದಲ್ಲಿ ಅದ್ಭುತ ಸಂಸ್ಕೃತಿಯ ಅನಾವರಣವಾಗುತ್ತಿದೆ. ಈ ಸಂಸ್ಕೃತಿಯಲ್ಲಿ ಬ್ರಾತೃತ್ವ, ಸತ್ಯದ ಆವಿಷ್ಕಾರವಿದೆ. ಹೃದಯ ಗೆಲ್ಲುವ ಸಾಹಿತ್ಯ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಲಿ ಹೇಳಿದರು.

ಉರ್ವಾಸ್ಟೋರ್‌ನ ತುಳುಭವನದಲ್ಲಿ ಶನಿವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಡಾ.ಉದಯ ಕುಮಾರ ಇರ್ವತ್ತೂರು ಬರೆದ ‘ಲೋಕಗೆಂದಿನ ಗಾಂಧಿಯೆರ್’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತುಳುನಾಡಿನವರು ಬುದ್ಧಿವಂತರಾಗಿದ್ದು ಅದನ್ನು ಉಪಯೋಗಿಸಿಕೊಂಡು ಸತ್ಯ, ನಿಷ್ಠೆ, ಪರಿಶ್ರಮದಿಂದ ಮುನ್ನಡೆದಾಗ ಜಗತ್ತನ್ನು ನಮ್ಮ ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ. ಮಹಾತ್ಮ ಗಾಂಧೀಜಿ ಲೋಕ ಗೆಲ್ಲಲು ಅವರ ಅಹಿಂಸೆ, ಸರಳತೆ, ತ್ಯಾಗದ ಮೂಲಕ ಮಾಡಿದ ಕೆಲಸ ಕಾರಣ. ಗಾಂಧೀಜಿ ಬಗ್ಗೆ ಯುವ ಜನತೆ ಹೆಚ್ಚು ಓದಿಕೊಂಡು ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಎನ್.ಇಸ್ಮಾಯಿಲ್ ಪುಸ್ತಕ ಪರಿಚಯಗೈದು, ಗಾಂಧಿ ತತ್ವದ ಅನುಷ್ಠಾನದ ಬಗ್ಗೆ ಹಿರಿಯರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ಇದರಿಂದ ಸುಖ, ಸಂತೋಷದ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು.

ಕೃತಿಯ ಕರ್ತೃ ಡಾ.ಉದಯ ಕುಮಾರ ಇರ್ವತ್ತೂರು ಪುಸ್ತಕ ಬರವಣಿಗೆಯ ಅನುಭವ ಹಂಚಿಕೊಂಡರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಸುಳ್ಯ ಗಾಂಧಿ ಚಿಂತನ ವೇದಿಕೆ ಸಂಚಾಲಕ ಹರೀಶ್ ಬಂಟ್ವಾಳ, ದ.ಕ. ಗಾಂಧಿ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ.ಸುಂದರ ಬೆಳುವಾಯಿ ಅತಿಥಿಗಳಾಗಿದ್ದರು.

ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯರಾದ ಸಂತೋಷ್ ಶೆಟ್ಟಿ ಹಿರಿಯಡ್ಕ ವಂದಿಸಿದರು. ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net