ಮೈಸೂರು: ಆಯೋಧ್ಯೆ ಶ್ರೀರಾಮಲಲ್ಲಾ ಮೂರ್ತಿ ಕೆತ್ತನೆಗೆ ನೆರವಾದ ಇತರ ಸಹ ಶಿಲ್ಪಿಗಳನ್ನೂ ಗುರುತಿಸಿ ಜಿಲ್ಲಾಡಳಿತದಿಂದ ಪೌರ ಸನ್ಮಾನ ಮಾಡಬೇಕು ಎಂದು ನಗರಪಾಲಿಕೆ ಮಾಜಿ ಸದಸ್ಯ ಎಂ.ಶ್ರೀರಾಮ ಆಗ್ರಹಿಸಿದರು.
ಅಯೋಧ್ಯೆ ರಾಮಮಂದಿರಲ್ಲಿ ನಗರದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗಿರುವುದು ಸಂತಸದ ಸಂಗತಿ. ಜತೆಗೆ ಅರುಣ್ ಯೋಗಿರಾಜ್ ಅವರಿಗೆ ಸೂಕ್ತ ಗೌರವವೂ ಸಂದಿದೆ. ಇದು ಸ್ವಾಗತಾರ್ಹ. ಆದರೆ ಅವರಿಗೆ ನೆರವಾದ ಸಹ ಶಿಲ್ಪಿಗಳನ್ನೂ ಗುರುತಿಸುವ ಕಾರ್ಯ ಆಗಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರದ ಅರಮನೆ ಶ್ವೇತವರಾಹಸ್ವಾಮಿ ದೇವಾಲಯದ ಒಳಗೋಡೆ ಮತ್ತು ಕಂಬಗಳಲ್ಲಿನ ತೈಲಚಿತ್ರ ನಶಿಸುತ್ತಿದ್ದ ಹಿನ್ನೆಲೆಯಲ್ಲಿ ಹಿರಿಯ ಸಂರಕ್ಷಣಾಧಿಕಾರಿಗಳು ಆರು ತಿಂಗಳ ಮಟ್ಟಿಗೆ ಇಂಟರ್‌ಶಿಫ್ ಆಧಾರದಲ್ಲಿ ಕೆಲವರನ್ನು ದುಡಿಸಿಕೊಂಡವರಿಗೆ ಉತ್ತರ ಪ್ರದೇಶ ಮೂಲದ ಎನ್‌ಆರ್‌ಎಲ್‌ಸಿ ಸಂಸ್ಥೆ ಸಕಾಲದಲ್ಲಿ ಶಿಷ್ಯವೇತನ ನೀಡದ ಕಾರಣ ಉತ್ತರ ಭಾರತದ ಇಬ್ಬರು ಕಲಾವಿದರು ತಮ್ಮ ವೆಚ್ಚ ಭರಿಸಲು ಸಾಧ್ಯವಾಗದೆ ವಾಪಸಾದರು ಎಂದರು.
ಆದರೆ ಕಲಾವಿದೆ ಎಸ್.ವಿ.ಸಹನಾ ಮಾತ್ರ ಕಾರ್ಯ ಮುಂದುವರಿಸಿದರು. ಹೀಗಿದ್ದರೂ ಇವರಿಗೆ ತೀರಾ ವಿಳಂಬವಾಗಿ ಶಿಷ್ಯ ವೇತನ ನೀಡಿದ್ದಲ್ಲದೆ, ಈಗ ನವೀಕರಣ ಕಾರ್ಯ ಅರ್ಧಕ್ಕೆ ಸ್ಥಗಿತಗೊಳಿಸಿರುವುದು ಬೇಸರದ ಸಂಗತಿ ಎಂದರು.
ಅರ್ಧಕ್ಕೆ ನಿಂತಿರುವ ಆ ಕೆಲಸ ಶೀಘ್ರದಲ್ಲೇ ಪುನರಾರಂಭಿಸಬೇಕು. ಈ ವೇಳೆ ತಾತ್ಕಾಲಿಕ ಸೇವೆ ಬದಲು ಕಾಯಂ ಆಗಿ ನಿಯೋಜಿಸಬೇಕು ಎಂದು ಮನವಿ ಮಾಡಿದರು. ಲಯನ್ ಸಂಸ್ಥೆಯ ಕೆ.ಶಿವಪ್ಪ, ಉದ್ಯಮಿ ಬಿ.ಲೋಚನ್ ನಾಗರಾಜ್, ಗುತ್ತಿಗೆದಾರ ನಿಂಗೇಗೌಡ, ಕಾರ್ಮಿಕ ಮುಖಂಡ ಆರ್.ರಂಗಸ್ವಾಮಿ, ಕಲಾವಿದೆ ಎಸ್.ವಿ.ಸಹನಾ ಮತ್ತಿತರರಿದ್ದರು.