

ಕೋ.ಶಿವಾಪುರ: ಸಮೀಪದ ಯರಗಣವಿ ಗ್ರಾಮಸ್ಥರು ಎಂ-ಸ್ಯಾಂಡ್(ಉತ್ಪಾದಿತ ಮರಳು) ಉದ್ಯಮದ ಕೆಲ ಅವೈಜ್ಞಾನಿಕ ಪ್ರಕ್ರಿಯೆಗಳು ಲವತ್ತಾದ ಜಮೀನು ಹಾಳು ಮಾಡುತ್ತಿವೆ. ವಿಪರೀತ ನೀರು ಬಳಕೆಯಿಂದ ಗ್ರಾಮದ ಸುತ್ತಮುತ್ತಲು ಅಂತರ್ಜಲ ಬರಿದು ಮಾಡುತ್ತಿದೆ ಎಂದು ಯರಗಟ್ಟಿಯಲ್ಲಿ ತಹಸೀಲ್ದಾರ್ ಎಂ.ವಿ. ಗುಂಡಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಕಲ್ಲನ್ನು ಪುಡಿ ಮಾಡಿ ತಯಾರಿಸುವ ಎಂ-ಸ್ಯಾಂಡ್‌ಗೆ ಮರಳಿನ ರೂಪ ನೀಡಲು ನೀರಿನಿಂದ ತೊಳೆಯಬೇಕು. ಆದರೆ, ಈ ಪ್ರಕ್ರಿಯೆ ಬಹುತೇಕ ಕಡೆ ವೈಜ್ಞಾನಿಕ ಮತ್ತು ಕಾನೂನಾತ್ಮಕವಾಗಿ ನಡೆಯುತ್ತಿಲ್ಲ.
ಯರಗಣವಿ ಗ್ರಾಮದಿಂದ 200 ಮೀಟರ್ ಅಂತರದಲ್ಲಿ ಸುತ್ತಲೂ ಸುಮಾರು 10ಕ್ಕೂ ಅಧಿಕ ಎಂ-ಸ್ಯಾಂಡ್ ಘಟಕಗಳಿವೆ. ಎಂ-ಸ್ಯಾಂಡ್ ತೊಳೆಯುವ ವೈಜ್ಞಾನಿಕ ವ್ಯವಸ್ಥೆಯಿಲ್ಲ. ಹೀಗಾಗಿ ವಿಪರೀತ ಅಂತರ್ಜಲದ ಬಳಕೆ ಮಾಡಲಾಗುತ್ತಿದೆ. ಇದರಿಂದ ಕೃಷಿಭೂಮಿ ಹಾಳಾಗುತ್ತಿದೆ. ಧೂಳಿನಿಂದ ಜನ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಹಾಗಾಗಿ ಎಂ. ಸ್ಯಾಂಡ್ ಘಟಕ ಬಂದ್ ಮಾಡುವಂತೆ ತಹಸೀಲ್ದಾರ್‌ಮೂಲಕ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಸದಸ್ಯರಾದ ಪಾರ್ವತಿ ಗುನ್ನಿ, ಲಕ್ಷ್ಮಣ ಪೂಜೇರ, ಅಶೋಕ ನಾಯ್ಕರ, ರಾಮಚಂದ್ರಗೌಡ ಪಾಟೀಲ, ಯಲ್ಲಪ್ಪ ಪೂಜಾರಿ, ಅಡಿವೆಪ್ಪಗೌಡ ಪಾಟೀಲ, ಸೋಮನಗೌಡ ಪಾಟೀಲ, ಮುತ್ತಪ್ಪ ಆನಿಗೋಳ, ನಾಗಪ್ಪ ಹರಿಜನ, ಮಹಾದೇವ ನಾಯ್ಕರ, ಪ್ರಕಾಶ ನಾಯ್ಕರ, ಮಲ್ಲಪ್ಪ ಆನಿಗೋಳ, ಮಂಜುನಾಥ ಸವದತ್ತಿ, ರೈತ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷ ಸೋಮು ರೈನಾಪುರ ಇತರರಿದ್ದರು.