ಮತ ಮೋಸದ ಕುರಿತು ಜಾಗೃತಿ ಮೂಡಿಸಿ, ಕಾಂಗ್ರೆಸ್ ಪದಾಧಿಕಾರಿಗಳಿಗೆ ಎಂ.ರಾಮಚಂದ್ರಪ್ಪ ಸಲಹೆ

congress sevadala meeting
ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಕೆಪಿಸಿಸಿ ಸೇವಾದಳದ ಅಧ್ಯಕ್ಷ ಎಂ.ರಾಮಚಂದ್ರಪ್ಪ ಮಾತನಾಡಿದರು. ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ವೈಜನಾಥ ಕರ್ಪೂರಮಠ, ಡಾ. ಗಂಗಾಧರ ಸಂಬಣ್ಣಿ ಮತ್ತಿತರರಿದ್ದಾರೆ.
Published on

ವಿಜಯಪುರ: ಮತ ಪಟ್ಟಿಗಳಲ್ಲಿರುವ ದೋಷ ಹಾಗೂ ಮತ ಮೋಸದ ಕುರಿತು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕೆಂದು ಕೆಪಿಸಿಸಿ ಸೇವಾದಳದ ಅಧ್ಯಕ್ಷ ಎಂ.ರಾಮಚಂದ್ರಪ್ಪ ಅವರು ಕಾರ್ಯಕರ್ತರಿಗೆ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೇವಾದಳ ಸಮಿತಿಯ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಹುಲ್‌ಗಾಂಧಿ ಅವರ ನಿರ್ದೇಶನದ ಮೇರೆಗೆ ಮತಪಟ್ಟಿಗಳಲ್ಲಿರುವ ದೋಷ ಹಾಗೂ ಮತ ಮೋಸದ ಕುರಿತು ಪಕ್ಷದ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮನೆ ಮನೆಗೆ ತೆರಳಿ ಮತದಾರರನ್ನು ಜಾಗೃತಗೊಳಿಸಬೇಕು. ಆ ಮೂಲಕ ಚುನಾವಣಾ ಆಯೋಗದ ಹಾಗೂ ಬಿಜೆಪಿಯ ಕುತಂತ್ರಗಳನ್ನು ಬಯಲುಗೊಳಿಸಬೇಕು. ಜನರಲ್ಲಿ ವಿಶ್ವಾಸ ಮೂಡಿಸಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿ ಬೆಳೆಯುವಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು ಹಾಗೂ ಕಾಂಗ್ರೆಸ್ ಸೇವಾದಳದ ವತಿಯಿಂದ ಪ್ರತಿ ತಿಂಗಳ ಕೊನೆಯ ವಾರದಂದು ಪಕ್ಷದ ಕಛೇರಿಯ ಎದುರು ರಾಷ್ಟ್ರ ಧ್ವಜಾರೋಹಣ ಮಾಡಿ ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತ ಗೊಳಿಸಬೇಕು ಎಂದರು.

ಸೇವಾ ದಳದ ವತಿಯಿಂದ ಮುಂದಿನ ತಿಂಗಳು ವಿಜಯಪುರ ಜಿಲ್ಲೆಯಲ್ಲಿ ಮೂರು ದಿನದ ಬೃಹತ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು ಸಿಎಂ, ಡಿಸಿಎಂ ಹಾಗೂ ಸಚಿವರಾದಿಯಾಗಿ ಎಲ್ಲ ಕಾಂಗ್ರೆಸ್ ಶಾಸಕರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಶಿಬಿರ ಯಶಸ್ವಿಗೊಳಿಸಬೇಕೆಂದರು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಪ್ರಾಮಾಣಿಕತೆಯಿಂದ ದುಡಿದರೆ ಮಾತ್ರ ಪಕ್ಷ ಬಲಗೊಳ್ಳಲಿದೆ. ಪಕ್ಷ ಸಂಘಟನೆಗೆ ಸರ್ವರೂ ಕೈಜೋಡಿಸಬೇಕು. ನಿಷ್ಠೆಯಿಂದ ಕೆಲಸ ಮಾಡಬೇಕೆಂದರು.

ಸರ್ವಜನರ ಹಿತಾಶಕ್ತಿ ಕಾಪಾಡುವದರ ಜೊತೆಗೆ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸಿದ್ಧಾಂತಗಳೊಂದಿಗೆ ಜನರ ಒಳಿತು ಮಾಡುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ತಾವೆಲ್ಲರೂ ನಿಷ್ಠೆ ಹಾಗೂ ಶಿಸ್ತಿನಿಂದ ಪಕ್ಷದ ಸಂಘಟನೆ ಮಾಡುವುದರ ಮೂಲಕ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಪಕ್ಷ ಜಯಭೇರಿ ಬಾರಿಸಲು ಶ್ರಮಿಸಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಡಾ. ಗಂಗಾಧರ ಸಂಬಣ್ಣಿ, ಶಬ್ಬೀರ ಜಾಗಿರದಾರ, ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಚಾಂದಸಾಬ ಗಡಗಲಾವ, ರಾಜೇಶ್ವರಿ ಚೋಳಕೆ, ವಿಜಯಕುಮಾರ ಕಾಳೆ, ಸಮೀನಾ ಮಂಟೂರ, ಶರಣಪ್ಪ ಯಕ್ಕುಂಡಿ, ಸಂತೋಷ ಬಾಲಗಾವಿ, ಪ್ರಕಾಶ ಗುಣದಾಳ, ರಮಜಾನ್ ಹೆಬ್ಬಾಳ, ಕೃಷ್ಣಾ ಕಾಮಟೆ, ಎಂ.ಎಂ. ಮುಲ್ಲಾ (ದ್ಯಾಬೇರಿ) , ವಸಂತ ಹೊನಮೋಡೆ, ಸಿದ್ದಪ್ಪ ಚಡಚಣ, ಅಪ್ಪಾಸಲಿ ಪಿಂಜಾರ, ಮಲ್ಲಿಕಾರ್ಜುನ ಯಂಕಂಚಿ, ಅಕ್ಬರ್ ಗೋತಾವಿ, ಪ್ರಶಾಂತ ಪೂಜಾರಿ, ರಾಚಪ್ಪ ಬಂಥನಾಳ, ಲಾಲಸಾಬ ಜಮಾದಾರ, ಬಸಪ್ಪ ಕೋಲಕಾರ, ಗೋಪಿನಾಥ ಜಮಾದಾರ, ಗಾಲಿಬಸಾಬ ನಾಗಾಂವಿ, ದಿಲೀಪ ಪ್ರಭಾಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net