ವಿಜಯವಾಣಿ ವರದಿ ಉಲ್ಲೇಖಿಸಿದ ಎಂಆರ್‌ಪಿ

h19-m.r.patil
Published on

ಹುಬ್ಬಳ್ಳಿ: ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ 13 ವೈದ್ಯರು ಇರಬೇಕಿತ್ತು. ಆದರೆ, ಬರೀ ನಾಲ್ವರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲಿಯ ಎಲೆಕ್ಟ್ರೇಷಿಯನೊಬ್ಬರು ರೋಗಿಗೆ ಚಿಕಿತ್ಸೆ ನೀಡಿದ್ದರ ಕುರಿತು ‘ವಿಜಯವಾಣಿ’ಯಲ್ಲಿ ಇತ್ತೀಚೆಗೆ ರಾಜ್ಯಮಟ್ಟದ ಸುದ್ದಿಯಾಗಿದೆ. ಕೂಡಲೇ ಕ್ರಮ ಜರುಗಿಸಬೇಕು ಎಂದು ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಅವರು ಬುಧವಾರ ಸದನದಲ್ಲಿ ಒತ್ತಾಯಿಸಿದರು.

ಇಂತಹ ಅವಘಡಗಳು ನಡೆಯುತ್ತಿದ್ದು, ಹುದ್ದೆಗಳ ಭರ್ತಿಗೆ ಮನವಿ ಕೊಟ್ಟರೂ ಯಾವುದೇ ಕ್ರಮವಾಗಿಲ್ಲ. ಆರೋಗ್ಯ ಕೇಂದ್ರ ಆರಂಭಿಸುವ ಕುರಿತು ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳಿಂದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ ಭೂಮಿ ಮಂಜೂರು ಮಾಡಿದ್ದರು ಎಂದು ವಿವರಿಸಿದರು.

ಸಂಶಿ ಗ್ರಾಮದಲ್ಲಿ ಐಟಿಐ ಕಾಲೇಜ್ ಇದೆ. ಕೊಟ್ಟ 20 ಗುಂಟೆ ಜಾಗ ರಾಜ್ಯಪಾಲರ ಹೆಸರಿಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿ ಇದೆ. ಕೂಡಲೇ ಜಾಗ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಒಣಮೆಣಸಿನಕಾಯಿ ಬೆಳೆಗೆ ಮುಟುರು ರೋಗ ಬರುತ್ತಿದೆ. ಈ ಭಾಗದಲ್ಲಿ ಬ್ಯಾಡಗಿ ತಳಿ ಫೇಮಸ್. ದೇಶ-ವಿದೇಶದಲ್ಲೂ ಬೇಡಿಕೆ ಇದೆ. ತೋಟಗಾರಿಕೆ ಇಲಾಖೆ ಈ ಬೆಳೆ ಸಂರಕ್ಷಣೆ ಮಾಡಬೇಕು. ಅಲ್ಲದೇ ಕೋಲ್ಡ್ ಸ್ಟೋರೇಜ್ ನಿರ್ಮಿಸಬೇಕು ಎಂದರು.

ಬಯಲು ಸೀಮೆಯ 70 ಶಾಸಕರಿಗೆ ತಲಾ 35 ಲಕ್ಷ ರೂ. ಅನುದಾನ ಕೊಡಲಾಗುತ್ತಿದೆ. ಅದರ ಮಿತಿಯನ್ನು ಒಂದು ಕೋಟಿ ರೂ.ಗೆ ಹೆಚ್ಚಿಸಬೇಕು. ಹೊಲಗಳಿಗೆ ಹೋಗುವ ರಸ್ತೆ ಹಾಳಾಗಿವೆ. ವಾಡಿಕೆಗಿಂತ ಶೇ. 47ರಷ್ಟು ಮಳೆ ಕುಂದಗೋಳ ಭಾಗದಲ್ಲಿ ಸುರಿದಿದ್ದರಿಂದ ಇಂಥ ಅನಾಹುತ ಆಗಿದೆ. ಜೈನ ಅಭಿವೃದ್ಧಿ ಮಂಡಳಿಯನ್ನು ಕೂಡಲೇ ಸ್ಥಾಪಿಸಬೇಕು. ಅಲ್ಲದೇ ಸ್ವಾತಂತ್ರೃ ಹೋರಾಟಗಾರ, ಕರ್ನಾಟಕ ಏಕೀಕರಣ ರೂವಾರಿ ಅದರಗುಂಚಿ ಶಂಕರಗೌಡರ ಹೆಸರು ಚಿರಸ್ಥಾಯಿಗೊಳಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಸದನದಲ್ಲಿ ಎಂಆರ್‌ಪಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net