

ಹೊನ್ನಾಳಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಪಾಳೇಗಾರಿಕೆ ರಾಜಕಾರಣ ಮಾಡುತ್ತ ಅಟ್ಟಹಾಸದಿಂದ ಮೆರೆಯುತ್ತಿದೆ, ಇದು ಬಹಳ ದಿನ ನಡೆಯಲ್ಲ ಎಂಬುದು ಅರಿಯಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ರಾಜ್ಯದಲ್ಲಿ ಅಭಿವೃದ್ಧಿಯೇ ಮರೀಚಿಕೆಯಾಗಿದೆ. ರಸ್ತೆಗಳೆಲ್ಲ ಗುಂಡಿಮಯವಾಗಿದೆ. ಹೂಡಿಕೆದಾರರು ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ, ಇದರ ಬಗ್ಗೆ ಚಿಂತನೆ ಮಾಡದ ಸಚಿವ ಪ್ರಿಯಾಂಕ ಖರ್ಗೆ ದೇಶಭಕ್ತ ಸಂಘಟನೆ ಆರೆಸ್ಸೆಸ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯುದ್ಧದ ಸಂದರ್ಭ, ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ರೈಲ್ವೆ ಅಪಘಾತ ಹೀಗೆ ಅನೇಕ ಅವಘಡಗಳು ಸಂಭವಿಸಿದಾಗ, ಸಂತ್ರಸ್ತರ ಬದುಕು ಮೂರಾಬಟ್ಟೆಯಾದಾಗ ಅವರಿಗೆ ಬೇಕಾದ ಸೌಲಭ್ಯಗಳನ್ನು ಕೊಟ್ಟು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಆರೆಸ್ಸೆಸ್. ನಂತರ ಬರುವುದು ಸರ್ಕಾರ. ಇಂತಹ ರಕ್ಷಣಾ ಕಾರ್ಯದಲ್ಲಿ ತೊಡಗುವ ಸಂಘಕ್ಕೆ ಅನಗತ್ಯವಾಗಿ ಮಾತನಾಡುವುದನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆಗೆ ತಿರುಗೇಟು ನೀಡಿದರು.
ಪ್ರಿಯಾಂಕ ಖರ್ಗೆ ಅವರು ತಂದೆ ಹೆಸರಿನಲ್ಲಿ ಅಧಿಕಾರ ಪಡೆದು ಸಚಿವರಾಗಿದ್ದಾರೆಯೇ ಹೊರತು ತಮ್ಮ ಸಾಮರ್ಥ್ಯದಿಂದಲ್ಲ ಎಂಬುದನ್ನು ಮೊದಲು ಅರಿಯಬೇಕು. ಮೆದುಳಿಗೂ ನಾಲಿಗೆಗೂ ಲಿಂಕ್ ಇಲ್ಲದೆ ಮಾತನಾಡುವ ಅವರ ಮಾತನ್ನು ರಾಜ್ಯದ ಜನತೆ ಗಂಭೀರವಾಗಿ ಪರಿಗಣಿಸಿಲ್ಲ, ಇನ್ನು ಸಂಘ ಪರಿಗಣಿಸುತ್ತದೆಯೇ ಎಂದು ಪ್ರಶ್ನಿಸಿದರು.
ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅಲ್ಲಿನ ತಹಸೀಲ್ದಾರ್ ಅನುಮತಿಗೆ ನಿರಾಕರಿಸಿರುವುದು ಖಂಡನೀಯ. ಆದರೆ ಹೈಕೋರ್ಟ್ ನ.2ಕ್ಕೆ ಪಥಸಂಚಲನ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಮೂಲಕ ಚಿತ್ತಾಪುರದ ಶಾಸಕ ಹಾಗೂ ಸಚಿವರಿಗೆ ಬಿಗ್ಶಾಕ್ ನೀಡಿದೆ ಎಂದರು.
ಸಂಘದ ಕಾರ್ಯಕ್ರಮಗಳಿಗೆ ಅನುಮತಿ ನೀಡಲ್ಲ ಎನ್ನುವರು, ರಸ್ತೆಯಲ್ಲೇ ನಮಾಜ್ ಮಾಡುತ್ತ ಸಂಚಾರಕ್ಕೆ ತೊಂದರೆ ನೀಡುವ ಅಲ್ಪಸಂಖ್ಯಾತರ ವಿರುದ್ಧ ಕ್ರಮ ಜರುಗಿಸಲ್ವಾ? ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಜರುಗಿಸುವುದಾದರೆ ರಸ್ತೆ, ಬಸ್ ನಿಲ್ದಾಣ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ದೇಶದಲ್ಲಿ ಹಿಂದುಗಳೆಲ್ಲ ಒಂದಾಗುತ್ತಿದ್ದಾರೆ. ಇದಕ್ಕೆ ಕಾರಣ ಸಂಘ ಎನ್ನುವುದನ್ನು ಅರಿತ ಕೆಲ ಸಚಿವರು ಆರೆಸ್ಸೆಸ್ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತ ಸಂಘವನ್ನು ಮಣಿಸುವ ಕೆಲಸ ಮಾಡಿತ್ತಿದ್ದಾರೆ. ಇವರಿಂದ ಏನೂ ಮಾಡಲು ಆಗುವುದಿಲ್ಲ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ಜೆ.ಕೆ. ಸುರೇಶ್, ದೊಡ್ಡೇರಿ ಗಿರೀಶ್, ಅಜೆಯ, ಚನ್ನೇಶಯ್ಯ, ಮಾರುತಿನಾಯ್್ಕ ದೇವರಾಜ್, ನಾಗರಾಜ್, ನೆಲಹೊನ್ನೆ ಮಂಜುನಾಥ್, ರಂಗನಾಥ್ ಸೇರಿ ಅನೇಕ ಬಿಜೆಪಿ ಮುಖಂಡರಿದ್ದರು.