ರೈತರ ಹಿತಕ್ಕೆ ಪ್ರಾಣ ಕೊಡಲು ಸಿದ್ಧ

hnl mpr 1 sep 9
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
Published on

ಹೊನ್ನಾಳಿ: ಪ್ರಾಣ ಒತ್ತೆ ಇಟ್ಟಾದರೂ ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡುತ್ತೇನೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಕುಂದೂರು ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ರೈತ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಭದ್ರಾನಾಲೆ ಅಚ್ಚುಕಟ್ಟು ಪ್ರದೇಶದ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ಪ್ರಚಾರಕ್ಕಾಗೋ, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೋ ಅಥವಾ ಇನ್ಯಾವುದೋ ಉದ್ದೇಶದಿಂದ ಈ ಹೋರಾಟ ಮಾಡುತ್ತಿಲ್ಲ. ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕತೆಯಿಂದ ಹೋರಾಟ ಮಾಡಲಾಗುತ್ತಿದೆ. ಜತೆಗೆ ನಾಲೆ ಸೀಳಿ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ಕೊಡುತ್ತಿರುವ ಬಗ್ಗೆ ವಾಸ್ತವಾಂಶವನ್ನು ರೈತರಿಗೆ ವಿವರಿಸಬೇಕಿದೆ ಎಂದು ಸ್ಪಷ್ಟಪಡಿಸಿದರು.

ಪಕ್ಕದ ಜಿಲ್ಲೆಯ ಜನರಿಗೆ ಕುಡಿಯುವ ನೀರು ಕೊಡಲು ನಮ್ಮ ವಿರೋಧವಿಲ್ಲ. ಆದರೆ ನಾಲೆ ಸೀಳಿ ನೀರು ಕೊಟ್ಟರೆ ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಕೊಡಲಾಗದು. ಇದರಿಂದ 5 ಸಾವಿರ ಕ್ಯೂಸೆಕ್ ನೀರು ಸೋರುತ್ತಿದೆ, ಇದಕ್ಕೆ ಯಾರು ಹೊಣೆ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕಾಗಿ ವಿವಿಧ ಹಂತಗಳ ಹೋರಾಟದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಇಲ್ಲಿನ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ರಾಜಕೀಯ ನಿವೃತ್ತಿಗೆ ಸಿದ್ಧ: ಭದ್ರಾ ನಾಲೆಯ 10 ಅಡಿ ಆಳದಲ್ಲಿ ನಾಲೆ ಸೀಳಿ ಉಭಯ ಜಿಲ್ಲೆಗಳಿಗೆ ನೀರು ಕೊಟ್ಟಿಲ್ಲ ಎಂದು ಶಾಸಕರು ಸಾಬೀತು ಪಡಿಸಿದರೆ ನಾನು ರಾಜಕೀಯವಾಗಿ ನಿವೃತ್ತನಾಗಲು ಸಿದ್ಧ ಎಂದು ಸವಾಲು ಹಾಕಿದರು.

ನಾವು ಪ್ರತಿಪಕ್ಷದವರಾಗಿ ಜಿಲ್ಲೆಯ ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ, ಆದರೆ ಕ್ಷೇತ್ರದ ಜನರ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದವರು ಕೃಷಿಕರ ಪರವಾಗಿ ಹೋರಾಟ ಮಾಡದೆ ಅವರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಈ ಅವೈಜ್ಞಾನಿಕ ಕಾಮಗಾರಿಯಿಂದ ಬೇಸಿಗೆಯಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಸಿಗುವುದು ಕಷ್ಟವಾಗಬಹುದು. ಆದ್ದರಿಂದ ಈ ಕಾಮಗಾರಿ ಮುಂದುವರಿದರೆ ನಾವು ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ತುಂಗಾ ನಾಲೆಯಿಂದ 17.50 ಟಿಎಂಸಿ ನೀರನ್ನು ಭದ್ರಾ ನಾಲೆಗೆ ಹರಿಸಬೇಕು. ಇದಕ್ಕಾಗಿ ಮುಂದಿನ ಹೋರಾಟವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ದಾವಣಗೆರೆ ರೈತರ ಜೀವನಾಡಿ ಭದ್ರೆ. ಈ ಭಾಗದ ರೈತರಿಗೆ ಅನ್ಯಾಯವಾಗದಂತೆ ನಾವೆಲ್ಲರೂ ಹೋರಾಟ ಮಾಡಿ ಅವರಿಗೆ ನ್ಯಾಯ ಒದಗಿಸುತ್ತೇವೆ. ರೇಣುಕಾಚಾರ್ಯ ಅವರು ಈ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ನಾವು ಅವರಿಗೆ ಬೆಂಬಲ ವ್ಯಕ್ತಪಡಿಸಿ ಜತೆ ಇರುವುದಾಗಿ ಹೇಳಿದರು.

ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್ ಹಾಗೂ ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಭದ್ರಾ ಅಚ್ಚುಕಟ್ಟು ರೈತರ ಒಳಿತಿಗಾಗಿ ಹೋರಾಟ ಮಾಡಲಾಗುತ್ತಿದೆ. ಆದರೆ ಮತದಾರರ ಋಣ ತೀರಿಸಲು ಹೋರಾಟ ಮಾಡಬೇಕಾದ ಕ್ಷೇತ್ರದ ಶಾಸಕರು ನಮ್ಮನ್ನು ನಿರುದ್ಯೋಗಿಗಳು ಎಂದು ಟೀಕಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಬಸವರಾಜ ನಾಯ್್ಕ ಹರಿಹರದ ಚಂದ್ರಶೇಖರ್ ಪೂಜಾರ್, ಜಿಲ್ಲಾ ರೈತ ಒಕ್ಕೂಟ ಅಧ್ಯಕ್ಷ ಕೊಳೆನಹಳ್ಳಿ ಸತೀಶ್ ಮಾತನಾಡಿದರು.

ಹೊಳೆ ಸಿರಿಗೆರ ನಾಗನಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಲೋಕಿಕೆರೆ ನಾಗರಾಜ್, ಪ್ರಧಾನ ಕಾರ್ಯದರ್ಶಿ ಕಡಳೆಬಾಳು ಧನಂಜಯ, ಜಿಪಂ ಮಾಜಿ ಸದಸ್ಯ ಗುರುಮೂರ್ತಿ, ಕುಂದೂರು ಅನಿಲ್, ಅರಕೆರೆ ನಾಗರಾಜು, ಜೆ.ಕೆ.ಸುರೇಶ್, ಜಗದೀಶ್ ಬಣಕಾರ್, ನೆಲಹೊನ್ನೆ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಲತಾ ಹಾಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net