

ಹೊನ್ನಾಳಿ: ಭಾರತವನ್ನು ವಿಶ್ವಗುರುವಾಗಿ ಜಗತ್ತಿನ ಎಲ್ಲ ರಾಷ್ಟ್ರಗಳು ಗೌರವಿಸಬೇಕು, ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರನೇ ಅವಧಿಯ ಮೊದಲನೇ ವರ್ಷ ಪೂರೈಸಿದ ಹಿನ್ನ್ನೆಲೆಯಲ್ಲಿ ಗುರುವಾರ ಹೊನ್ನಾಳಿ ಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಬಿಜೆಪಿ ಪ್ರಮುಖರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಮೋದಿ ಅವರ ಸುದೀರ್ಘ 11 ವರ್ಷಗಳ ಅವಧಿಯಲ್ಲಿ ಭಾರತದ ಪ್ರಗತಿ ಇಡೀ ವಿಶ್ವಕ್ಕೆ ಅನುಕರಣೀಯ. ಅಲ್ಲದೇ ದೇಶ ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ. ಶೇ.22 ರಷ್ಟು ಇದ್ದ ಕಡುಬಡತನ ಇದೀಗ ಶೇ. 5.7ಗೆ ಇಳಿದಿರುವುದು ಸಂತಸದ ವಿಷಯ ಎಂದು ಹೇಳಿದರು.
ಮೇಕ್ ಇನ್ ಇಂಡಿಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿನ ಪ್ರಗತಿಯಿಂದಾಗಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಕೆಲವೇ ವರ್ಷಗಳಲ್ಲಿ ದೇಶದ ಅಭಿವೃದ್ಧಿ ಕಂಡು ಇಡೀ ಜಗತ್ತೇ ನಿಬ್ಬೆರಗಾಗಿದೆ ಎಂದರು.
ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ನೀಡಿದ್ದ ಪರಿಣಾಮ ಹೊಗೆಮುಕ್ತ ರಾಷ್ಟ್ರವಾಗಿ ಮಾಡಿದ್ದಾರೆ. ಫಸಲ್ ಬಿಮಾ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ಜಾರಿ ಮಾಡಿ ರೈತರನ್ನು ಆರ್ಥಿಕವಾಗಿ ಸೃದೃಢರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.
ಕರೊನಾ ಸಮಯದಲ್ಲಿ 200 ಕೋಟಿ ಲಸಿಕೆ ತಯಾರಿಸಿ, ದೇಶವಾಸಿಗಳಿಗಲ್ಲದೇ ಇತರ ದೇಶಗಳಿಗೂ ನೀಡಿ ಜವಾಬ್ದಾರಿಯುತ ಸರ್ಕಾರ ಎಂಬ ಬಿರುದಿಗೆ ಪಾತ್ರವಾಯಿತು. ದೇಶದ ರಕ್ಷಣೆ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗದೆ, ಶತ್ರು ರಾಷ್ಟ್ರಕ್ಕೆ ಚುರುಕು ಮುಟ್ಟಿಸಿ, ಯುದ್ಧ ನಿಲ್ಲಿಸುವಂತೆ ಪಾಕಿಸ್ತಾನ ಅಂಗಲಾಚುವಂತೆ ಮಾಡಿತು ಎಂದರು.
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕುಬೇಂದ್ರಪ್ಪ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 10 ವರ್ಷ ಆಡಳಿತ ನಡೆಸಿತು. ಈ ವೇಳೆ ಭ್ರಷ್ಟಾಚಾರ ಹಾವಳಿ ಜೋರಿತ್ತು. ಅಲ್ಲದೆ ಉಗ್ರರು ಭಾರತದೊಳಗೆ ಸುಲಭವಾಗಿ ನುಸುಳುವ ಅವಕಾಶ ಇತ್ತು. ಆದರೆ ನಮ್ಮ ಕೇಂದ್ರ ಸರ್ಕಾರ ಭಾರತದೊಳಗೆ ಒಬ್ಬ ಉಗ್ರ ನಸುಳುವುದಕ್ಕೂ ಬಿಡಲಿಲ್ಲ ಎಂದು ತಿಳಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಮುಖಂಡರಾದ ನೆಲಹೊನ್ನೆ ಮಂಜುನಾಥ್, ಜೆ.ಕೆ. ಸುರೇಶ್, ಶಿವಾನಂದ್, ಬೀರಪ್ಪ ಮಾತನಾಡಿದರು.
ಮುಖಂಡರಾದ ದೊಡ್ಡೇರಿ ರಾಜಣ್ಣ, ಮಾರುತಿನಾಯ್್ಕ ರವಿಕುಮಾರ್, ಕುಳಗಟ್ಟೆ ರಂಗನಾಥ್, ಅನಿಲ್ ಕುಂದುರು, ಸುರೇಂದ್ರನಾಯ್್ಕ ಹಾಗೂ ಹಲವಾರು ಬಿಜೆಪಿ ನಾಯಕರು ಇದ್ದರು.