

ಕಾರವಾರ: ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತಂದು ಸಾರ್ವಜನಿಕರಿಗೆ ಖಾಕಿಯ ಮೇಲೆ ಮತ್ತಷ್ಟು ನಂಬಿಕೆ ಬರುವಂತೆ ಕಾರ್ಯನಿರ್ವಹಿಸಲಾಗುವುದು ಎಂದು ನೂತನ ಎಸ್‌ಪಿ ಎಂ.ನಾರಾಯಣ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ 58 ನೇ ಎಸ್‌ಪಿಯಾಗಿ ಗುರುವಾರ ಅಧಿಕಾರ ವಹಿಸಿಕೊಂಡು, ಜಿಲ್ಲೆಯ ಅಧೀನ ಅಧೀಕಾರಿಗಳ ಪರಿಚಯ ಸಭೆಯ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಉತ್ತರ ಕನ್ನಡ ನನಗೆ ಹೊಸದಲ್ಲ 14 ವರ್ಷಗಳ ಹಿಂದೆ ಭಟ್ಕಳದಲ್ಲಿ ಡಿವೈಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದೇನೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಲು ಉತ್ತರ ಕನ್ನಡ ಜಿಲ್ಲೆಯ ಅನುಭವ ಕಾರಣ. ಜಿಲ್ಲೆಯ ಪರಿಸರ, ಇಲ್ಲಿನ ಜನರ ಮನಸ್ಥಿತಿಯ ಸಂಪೂರ್ಣ ಅರಿವಿದೆ. ಉತ್ತರ ಕನ್ನಡ ಜಿಲ್ಲೆಯ ಜನರು ಬುದ್ದಿವಂತರು, ಶಾಂತಿ ಪ್ರಿಯರು ನನ್ನ ಮನೆಗೆ ಮರಳಿ ಬಂದಂತಾಗಿದೆ ಎಂದರು.
ಅರಣ್ಯ ಪ್ರಕರಣಗಳು, ಗಡಿಯಿಂದ ಬರುವ ಅಕ್ರಮ ಮದ್ಯ ಮುಂತಾದ ವಿಷಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಜತೆ ಸಮನ್ವಯ ಸಾಽಸಲಾಗುವುದು. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಇತರ ಇಲಾಖೆಗಳಿಗೆ ಪೊಲೀಸ್ ಇಲಾಖೆಯಿಂದ ಬೇಕಾದ ಎಲ್ಲ ಅಗತ್ಯ ನೆರವು ನೀಡಲು ಕ್ರಮ ವಹಿಸಲಾಗುವುದು ಎಂದರು.
ರಾಜ್ಯ ಗುಪ್ತಚರ ಇಲಾಖೆ, ಎಟಿಎಸ್, ಬೆಂಗಳೂರು ನಗರ ಸಂಚಾರ ವಿಭಾಗ ಸೇರಿ ವಿವಿಧೆಡೆ ಕಾರ್ಯನಿರ್ವಹಿಸಿದ್ದರಿಂದ ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ನಮ್ಮ ನೆಟ್ವರ್ಕ್ ಹೊಂದಿದ್ದೇನೆ. ಮಾಹಿತಿದಾರರ ಜಾಲವನ್ನು ಇನ್ನಷ್ಟು ಬೆಳೆಸಿಕೊಂಡು ಜಿಲ್ಲೆಯಲ್ಲಿ ರಾಷ್ಟ್ರ ವಿರೋಧಿ, ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟಲು ಕ್ರಮ ವಹಿಸಲಿದ್ದೇನೆ. ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ಇಡಲಾಗುವುದು. ಕೋಮು ಸೌಹಾರ್ದ ಕೆಡಿಸುವವರನ್ನು ಸಹಿಸುವುದಿಲ್ಲ. ಸುಳ್ಳು ಪ್ರಕರಣಗಳು ದಾಖಲಾಗದಂತೆ ಗಮನ ಹರಿಸಲಾಗುವುದು. ತನಿಖೆಯನ್ನು ಬಲಪಡಿಸಿ, ದಾಖಲಾದ ಎಲ್ಲ ನಿಜ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಪ್ರಯತ್ನಿಸಲಾಗುವುದು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ಗೆ ವಿಶೇಷ ಗೌರವ ಇದೆ. ಜಿಲ್ಲೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಸಹಕಾರ ಪಡೆದು ಜನ ಸುರಕ್ಷಿತವಾಗಿರಲು ಬೇಕಾದ ಎಲ್ಲ ಕ್ರಮ ವಹಿಸಲಾಗುವುದು. ಜನರ ಸಮಸ್ಯೆಗಳಿಗೆ ಸದಾ ಸ್ವಾಗತ. ಇಲಾಖೆಯ ತಪ್ಪುಗಳನ್ನು ತಿದ್ದಲು ಸದಾ ಬದ್ಧವಾಗಿದ್ದೇನೆ ಎಂದರು. ಹೆಚ್ಚುವರಿ ಎಸ್‌ಪಿ ಸಿ.ಟಿ.ಜಯಕುಮಾರ್ ಹಾಗೂ ಎಲ್ಲ ಡಿವೈಎಸ್‌ಪಿಗಳಿದ್ದರು.