

ಹುಬ್ಬಳ್ಳಿ: ಸ್ವಚ್ಛ ಪರಿಸರ ಹಾಗೂ ಆರೋಗ್ಯ ಇವುಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಫಿಟ್ ಇಂಡಿಯಾದಿಂದ (ಆರೋಗ್ಯವಂತ ಭಾರತ) ಮಾತ್ರ ವಿಕಸಿತ ಭಾರತವಾಗಲು ಸಾಧ್ಯ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅಭಿಪ್ರಾಯಪಟ್ಟರು.
ನಗರದ ಹೊಸೂರ- ಉಣಕಲ್ಲ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಐಸಿರಿ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತದ ಅಭಿವೃದ್ಧಿಯ ವೇಗ ಕಂಡು ಜಗತ್ತು ಬೆರಗಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತವು ತಾಂತ್ರಿಕತೆ, ವೈದ್ಯಕಿಯ ಎಲ್ಲ ಕ್ಷೇತ್ರಗಳಲ್ಲಿ ಬೆಳವಣಿಗೆ ದಾಖಲಿಸಿದೆ. ವೈದ್ಯಕಿಯ ಕ್ಷೇತ್ರದಲ್ಲಿ ಅಗಾಧ ಶಕ್ತಿ ಗಳಿಸಿಕೊಂಡಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಕೇವಲ 7ರಷ್ಟಿದ್ದ ಇಂಡಿಯನ್ ಇನ್ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸ್ (ಏಮ್ಸ್) ಈಗ 22ಕ್ಕೆ ಹೆಚ್ಚಳವಾಗಿವೆ. ಭಾರತದ ಅರ್ಥ ವ್ಯವಸ್ಥೆ ಬಹಳಷ್ಟು ಸುಧಾರಣೆ ಕಂಡಿದೆ. ಪ್ರತಿಯೊಬ್ಬರೂ ನಾವು ಭಾರತೀಯರು ಎಂದು ಗರ್ವದಿಂದ ಹೇಳುವಂತಹ ವಾತಾವರಣ ಸೃಷ್ಟಿಯಾಗಿದೆ. ದೇಶ ಮೊದಲು ಎಂಬ ಭಾವ ಎಲ್ಲರಲ್ಲೂ ಬರುತ್ತಿದೆ. ಜಗತ್ತಿನಲ್ಲಿ ಭಾರತೀಯರ ಬಗ್ಗೆ ಇದ್ದ ದೃಷ್ಟಿಕೋನ ಈಗ ಬದಲಾಗಿದೆ ಎಂದು ಹೇಳಿದರು.
ಎಷ್ಟೇ ಪ್ರತಿಭಾಶಾಲಿಗಳಾಗಿದ್ದರೂ ನಾವು ಆರೋಗ್ಯವಾಗಿಲ್ಲ ಎಂದರೆ ಎಲ್ಲವೂ ವ್ಯರ್ಥ. ಹಾಗಾಗಿ ಇಂತಹ ಆರೋಗ್ಯವನ್ನು ತಂದು ಕೊಡುವ ವೈದ್ಯರು ನಮಗೆ ದೇವರ ಸ್ವರೂಪಿಯಾಗಿದ್ದಾರೆ. ಈ ಮಹೋನ್ನತ ಕಾರ್ಯದಲ್ಲಿ ಡಾ. ಎಂ.ಎಂ. ಜೋಶಿ ಅವರು ನಿರಂತರ ಸೇವಾ ಮನೋಭಾವದಿಂದ ತೊಡಗಿಕೊಂಡಿದ್ದಾರೆ. ಸೇವಾ ಗುಣ ಹೊಂದಿದ ಇವರಿಗೆ ಪದ್ಮ ಪ್ರಶಸ್ತಿ ಬಂದಿರುವುದು ಶ್ಲಾಘನೀಯ ಎಂದರು.
ಮೋದಿ ಸರ್ಕಾರದ ಸಾಧನೆಗಳನ್ನು ವಿವರಿಸಿದ ಉಪರಾಷ್ಟ್ರಪತಿಗಳು, ಪ್ರತಿಯೊಬ್ಬರೂ ವೈಯಕ್ತಿಕ ಆರೋಗ್ಯಕ್ಕೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸಂವಿಧಾನ ತಜ್ಞರಾಗಿರುವ ಜಗದೀಪ್ ಧನಕರ್ ಅವರು ವಕೀಲರಾಗಿದ್ದಾಗ ಒಂದೇ ಒಂದು ಕೇಸ್ನಲ್ಲಿ ಸೋಲು ಕಂಡಿಲ್ಲ. ಅಂತಹ ಮೇಧಾವಿಗಳು ಉಪರಾಷ್ಟ್ರಪತಿಯಾಗಿ ಅಚ್ಚುಕಟ್ಟಾಗಿ ಸದನ ನಡೆಸುತ್ತಿದ್ದಾರೆ ಎಂದರು.
ಕೇವಲ ಹಣಕ್ಕಾಗಿ ವೈದ್ಯ ವೃತ್ತಿ ಮಾಡದ ಡಾ. ಎಂ.ಎಂ. ಜೋಶಿ ಅವರು ಹಲವು ಉಚಿತ ನೇತ್ರ ತಪಾಸಣೆ ಶಿಬಿರಗಳ ಮೂಲಕ ಲಾಂತರ ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಬಡವರ ಬಾಳಿಗೆ ಬೆಳಕಾಗಿದ್ದಾರೆ. ಸಮಾಜದಿಂದ ಪಡೆದದ್ದನ್ನು ವಾಪಸ್ ಸಮಾಜಕ್ಕೆ ನೀಡಿದ್ದಾರೆ. ಕುಟುಂಬದ ಸದಸ್ಯರಿಗೂ ಸಂಸ್ಕಾರ ಕಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತವು ಮೆಡಿಕಲ್ ಹಬ್ ಆಗಿ ಬೆಳವಣಿಗೆ ಹೊಂದುತ್ತಿದ್ದು, ಕೆಲಸ ಮಾಡುವ ಕೈಗಳು ಭಾರತದಲ್ಲಿವೆ. ಹಾಗಾಗಿ ಜಗತ್ತು ಭಾರತೀಯರ ಮೇಲೆ ಭರವಸೆ ಹೊಂದುತ್ತಿದೆ ಎಂದರು.
ನೇತ್ರ ತಜ್ಞ ಡಾ. ಎಂ.ಎಂ. ಜೋಶಿ ಮಾತನಾಡಿ, ಐಸಿರಿ ಇದು ಹುಬ್ಬಳ್ಳಿಯಲ್ಲಿ ಎರಡನೇ ನೇತ್ರ ಆಸ್ಪತ್ರೆಯಾಗಿದೆ. 57 ವರ್ಷದಿಂದ ಬಡವ, ಶ್ರೀಮಂತ ಎಂದು ನೋಡದೇ ಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡುತ್ತ ಬರಲಾಗಿದೆ. ಇದು ಮುಂದುವರಿಯಲಿದೆ ಎಂದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಡಾ. ಎಂ.ಎಂ. ಜೋಶಿ ಅವರು ತಮ್ಮ ಸೇವಾ ಗುಣದಿಂದ ಈ ಭಾಗದಲ್ಲಿ ಹೆಸರುವಾಸಿಯಾಗಿದ್ದಾರೆ. ಮಾನವೀಯ ಹಾಗೂ ದೈವಿ ಎರಡೂ ಗುಣಗಳು ಅವರಲ್ಲಿ ಮೇಳೈಸಿವೆ ಎಂದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಶ್ರೀಮತಿ ಸುಧೇಶ ಧನಕರ್ ಅವರಿಗೆ ಧನ್ವಂತರಿ ಮೂತಿರ್ಯನ್ನು ನೀಡಿ ಸತ್ಕರಿಸಲಾಯಿತು.
ರಾಜ್ಯಪಾಲ ಥಾವರಚಂದ ಗೆಹ್ಲೋತ್, ಸಭಾಪತಿ ಬಸವರಾಜ ಹೊರಟ್ಟಿ, ಮೇಯರ್ ವೀಣಾ ಬರದ್ವಾಡ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಶ್ರೀನಿವಾಸ ಮಾನೆ, ಇತರರು ಉಪಸ್ಥಿತರಿದ್ದರು.
ಡಾ. ಕೃಷ್ಣ ಪ್ರಸಾದ ಕಾರ್ಯಕ್ರಮ ನಿರೂಪಿಸಿದರು. ಡಾ. ಎ.ಎಸ್. ಗುರುಪ್ರಸಾದ ಸ್ವಾಗತಿಸಿದರು. ಡಾ. ಶ್ರೀನಿವಾಸ ಜೋಶಿ ಪ್ರಾಸ್ತಾವಿಕ ಮಾತನಾಡಿ, ಆಸ್ಪತ್ರೆಯ ಮಾಹಿತಿ ನೀಡಿದರು. ಡಾ. ಕೆ.ವಿ. ಸತ್ಯಮೂರ್ತಿ ವಂದಿಸಿದರು.