

ಚಾಮರಾಜನಗರ: ನೈವೇದ್ಯಕ್ಕೆ ಮಾಂಸವನ್ನಿಟ್ಟು, ತನ್ನೆರಡು ಕಣ್ಣುಗಳನ್ನು ಕೊಟ್ಟು ಪರಶಿವನನ್ನೇ ಮೆಚ್ಚಿಸಿದವನು ಬೇಡರ ಕಣ್ಣಪ್ಪ. ಈ ಶಿವಭಕ್ತನ ಕಥೆ ಎಷ್ಟು ರೋಚಕವೋ ಅವರ ಕುಲಸ್ಥರಾದ ಬೇಡಗಂಪಣರ (ಬೇಡರ ಗುಂಪು) ಸಂಸ್ಕೃತಿ-ಪರಂಪರೆಯೂ ಅಷ್ಟೇ ಸ್ವಾರಸ್ಯಕರ.
ಕಣ್ಣಪ್ಪನ ಭಕ್ತಿಗೆ ಈಶ್ವರನೇ ಮರುಳಾದಂತೆ ಬೇಡಗಂಪಣರ ಆತ್ಮನಿವೇದನೆ ಕಂಡು ಮಹದೇಶ್ವರನೂ ಬೆರಗಾಗಿದ್ದ. ಹೀಗಾಗಿಯೇ ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರಬೆಟ್ಟದಲ್ಲಿ ಇಂದಿಗೂ ‘ಮಾಯ್ಕಾರ ಮಾದಪ್ಪ’ನಿಗೆ ಮೊದಲ ಪೂಜೆ ಸಲ್ಲಿಸುವವರು ಬೇಡಗಂಪಣರು (ಮಾದಪ್ಪನ ತಮ್ಮಡಿಗಳು). ಇವರ ಹೊರತಾಗಿ ಇತರರು ಗರ್ಭಗುಡಿ ಪ್ರವೇಶಿಸುವುದಿಲ್ಲ. ಅಲ್ಲದೆ ಸುತ್ತಮುತ್ತಲಿನ ಮಹದೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ಇವರೇ ಪ್ರಧಾನ ಅರ್ಚಕರಾಗಿ ಧಾರ್ವಿುಕ ಕಾರ್ಯ ನಡೆಸುತ್ತಿದ್ದಾರೆ.
‘ಮುದ್ದು ಮಾದಪ್ಪ’ನಿಂದ ಪರಿವರ್ತನೆ: ರಾಜ್ಯದಲ್ಲಿರುವ ಸೋಲಿಗರು, ಮೇದ, ಎರವ, ಜೇನುಕುರುಬ, ಬೆಟ್ಟದ ಕುರುಬ ಸೇರಿದಂತೆ ಇತರ ಪುರಾತನ ಬುಡಕಟ್ಟು ಸಮುದಾಯಗಳಲ್ಲಿ ಬೇಡಗಂಪಣರದೂ ಒಂದು ಜನಾಂಗ. ಪುರಾಣಕಥೆಗಳ ಪ್ರಕಾರ ಶತಮಾನಗಳ ಹಿಂದೆ ಬೇಡಗಂಪಣರು ಶ್ರೀಶೈಲದಲ್ಲಿ ವಾಸ ಮಾಡುತ್ತಿದ್ದರು. ರಾಜರುಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತ, ಯುದ್ಧಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ನಂತರ ಕರ್ನಾಟಕ, ತಮಿಳುನಾಡಿನ ಗುಡ್ಡಗಾಡುಗಳತ್ತ ವಲಸೆ ಬಂದರು. ಕಾಡಿನಲ್ಲಿ ಸೋಲಿಗರೊಂದಿಗೆ ವನ್ಯಜೀವಿಗಳನ್ನು ಬೇಟೆಯಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ವೇಳೆ ‘ಮುದ್ದು ಮಾದಪ್ಪ’ನ ಪ್ರಭಾವಕ್ಕೊಳಗಾಗಿ ಸಂಪೂರ್ಣವಾಗಿ ಪರಿವರ್ತನೆಗೊಂಡರು. ಲಿಂಗಧಾರಣೆಯೊಂದಿಗೆ ಶಿವದೀಕ್ಷೆ ಪಡೆದು ‘ಎಪ್ಪತ್ತೇಳು ಮಲೆಯ ಒಡೆಯ ಮಾದಪ್ಪ’ನ ಪೂಜೆ ಮಾಡುತ್ತಾ ಬುಡಕಟ್ಟು ಜನಾಂಗದ ಸಂಪ್ರದಾಯಗಳನ್ನೂ ಮೀರಿ ವಿಭಿನ್ನ ಆಚರಣೆಗಳನ್ನು ಅನುಸರಿಸಲು ಮುಂದಾದರು.
‘ಸಂಪನ್ನಗಾರ ಮಾದಪ್ಪ’ನ ಅನುಯಾಯಿಗಳಾದ ಬೇಡಗಂಪಣರು ಪ್ರಾಣಿಗಳನ್ನು ಬೇಟೆಯಾಡುವುದು, ಮಾಂಸಾಹಾರ ಸೇವನೆ ಮಾಡುವುದನ್ನು ತ್ಯಜಿಸಿ ವಿಶ್ವದ ಏಕೈಕ ಸಸ್ಯಹಾರಿ ಬುಡಕಟ್ಟು ಜನಾಂಗವಾಗಿ ಬದಲಾದರು.
ಮಡಿವಂತಗಾರರು: ಮಾದಪ್ಪನ ಮೇಲಿನ ಭಕ್ತಿಯಿಂದ ಪರಿವರ್ತನೆಗೊಂಡು ನಡೆ-ನುಡಿಯಲ್ಲಿ ಮಡಿವಂತಿಕೆ ಅಳವಡಿಸಿಕೊಂಡಿರುವ ಬೇಡಗಂಪಣರು, ಇಂದಿಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡೇ ಮಲೆ ಮಹದೇಶ್ವರಬೆಟ್ಟದ ಮಹದೇಶ್ವರಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. ಧಾರ್ವಿುಕ ಕಾರ್ಯಗಳನ್ನು ನಡೆಸುವಾಗ ದೇವರಿಗೆ ಉಗುಳು ಕೂಡ ಸೋಕಬಾರದು ಎಂಬ ರೂಢಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ಬರಿಗಾಲಲ್ಲೇ ತೆರಳಿ ಅಭಿಷೇಕಕ್ಕೆ ಬೇಕಾದ ಸಾಮಗ್ರಿಗಳನ್ನು ತರುತ್ತಾರೆ. ವಿಶೇಷ ಜಾತ್ರಾ ಮಹೋತ್ಸವಗಳಲ್ಲಿ ಬೇಡಗಂಪಣರಿಂದಲೇ ಮೊದಲ ಆರತಿ ನಡೆಯುತ್ತದೆ. ಮುಜರಾಯಿ ಇಲಾಖೆಯು ಮಹದೇಶ್ವರಬೆಟ್ಟದಲ್ಲಿ ವಿವಿಧ ಸಾಂಪ್ರದಾಯಿಕ ಪೂಜಾಕೈಂಕರ್ಯಗಳನ್ನು ಇವರಿಂದಲೇ ನಡೆಸುತ್ತಿದೆ.
ಬೇಡವಾದ ‘ಬೇಡಗಂಪಣರು’
ತಮಿಳುನಾಡಿನ 33 ಹಳ್ಳಿ, ಕರ್ನಾಟಕದ 18 ಗ್ರಾಮಗಳಲ್ಲಿ ಸುಮಾರು 26 ಸಾವಿರ ಬೇಡಗಂಪಣರು ವಾಸ ಮಾಡುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರಬೆಟ್ಟ, ಹನೂರು, ಪುಣಜನೂರು ಸೇರಿದಂತೆ ಇತರೆಡೆಗಳಲ್ಲಿ ನೆಲೆಸಿರುವ ಈ ಜನಾಂಗ ಇಂದಿಗೂ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿರುವ ಇವರು ಬುಡಕಟ್ಟು ಸಮುದಾಯದವರಾಗಿದ್ದರೂ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಹೀಗಾಗಿ ತಮ್ಮನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸಬೇಕೆಂದು ನಿರಂತರವಾಗಿ ಹೋರಾಡುತ್ತಿದ್ದಾರೆ.
‘ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿ ಮಹದೇಶ್ವರಸ್ವಾಮಿ ಮೇಲಿನ ಭಕ್ತಿಯಿಂದ ಅಹಿಂಸಾಮಾರ್ಗ ಅನುಸರಿಸುತ್ತಿದ್ದೇವೆ. ಮಾದಪ್ಪನ ಪೂಜೆಯಲ್ಲೇ ಸರ್ವ ಸುಖವನ್ನೂ ಕಾಣುತ್ತಿದ್ದೇವೆ. ಆಚಾರ-ವಿಚಾರಗಳಲ್ಲಿ ಬದಲಾವಣೆಗಳಾದ ಕಾರಣಕ್ಕೆ ಬುಡಕಟ್ಟು ಸಮುದಾಯದ ಸೌಲಭ್ಯಗಳು ದೊರೆಯದಿರುವುದು ಸರಿಯಲ್ಲ. ನಮ್ಮ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ, ಸರ್ಕಾರಿ ಉದ್ಯೋಗ ದೊರೆಯುವುದು ಕಷ್ಟವಾಗಿದೆ. | ಕೆ.ವಿ. ಮಾದೇಶ ಮಲೆಮಹದೇಶ್ವರಸ್ವಾಮಿ ಅರ್ಚಕರು.
ಕಿರಣ್ ಮಾದರಹಳ್ಳಿ