

ಕೆ.ಎಂ.ದೊಡ್ಡಿ: ಸರ್ಕಾರ ರೈತರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮೈತ್ರಿಯಾ ಶಿಕ್ಷಣ ಹಾಗೂ ಗ್ರಾಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕಾರ್ಕಹಳ್ಳಿ ಬಸವರಾಜು ಹೇಳಿದರು.
ಇಲ್ಲಿನ ರಂಗಭೂಮಿ ಕಲಾವಿದರ ಸಂಘದ ಕಚೇರಿಯಲ್ಲಿ ಮೈತ್ರಿಯಾ ಶಿಕ್ಷಣ ಹಾಗೂ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ರೈತರನ್ನು ಅಭಿನಂದಿಸಿ ಮಾತನಾಡಿದರು.
ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಮೂಲಕ ಸರ್ಕಾರ ರೈತರನ್ನು ಪ್ರೋತ್ಸಾಹಿಸಬೇಕು. ಇಲ್ಲದಿದ್ದರೆ ರೈತರು ವ್ಯವಸಾಯವನ್ನೇ ಬಿಟ್ಟು ಗುಳೆ ಹೋಗುವಂತಹ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ದೇಶ ಆಹಾರದ ಕೊರತೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಂಗಭೂಮಿ ಕಲಾವಿದರ ಸಂಘದ ಸಿ.ಎ.ಕೆರೆ ಹೋಬಳಿ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ ಮಾತನಾಡಿ, ರೈತರು ಶ್ರಮಿಕರು. ಅಂಥವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ರೈತರಾದ ಕಳ್ಳಿಮೆಳೆದೊಡ್ಡಿ ಸಿದ್ದೇಗೌಡ ಮತ್ತು ಆಲಭುಜನಹಳ್ಳಿ ನಾಡಗೌಡ ಸಿದ್ದೇಗೌಡ ಅವರನ್ನು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಅಣ್ಣೂರು ಸತೀಶ್ ಅಭಿನಂದಿಸಿದರು.
ಮೈತ್ರಿಯಾ ಶಿಕ್ಷಣ ಹಾಗೂ ಗ್ರಾಮಾಭಿವೃದ್ಧಿ ಟ್ರಸ್ಟ್ ಗೌರವಾಧ್ಯಕ್ಷ ಕೆ.ಎಸ್.ನಾಗೇಶ್, ಆಲಭುಜನಹಳ್ಳಿ ವೆಂಕಟೇಶ್, ತಿಪ್ಪೂರು ಅಂದಾನಿ, ಮಳ್ಳಿಮೆಳೆದೊಡ್ಡಿ ಸಿದ್ದರಾಜು, ಲೋಕೇಶ್, ರಾಜಣ್ಣ, ಡಿ.ವೆಂಕಟೇಶ್, ಗುರುದೇವರಹಳ್ಳಿ ಮಾದೇಶ್, ಸಿ.ಎ.ಕೆರೆ ಪ್ರಭುಸ್ವಾಮಿ, ಹುಸ್ಕೂರು ಪ್ರಭುಸ್ವಾಮಿ ಇತರರಿದ್ದರು.