

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿಯ ಮಹಾಂತೇಶ್ವರ ವಿದ್ಯಾ ಟ್ರಸ್ಟ್‌ನ ವಿಶ್ವನಾಥ ಕತ್ತಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎಂಕಾಂ ಕೋರ್ಸ್ ಪ್ರವೇಶ ಪ್ರಾರಂಭಿಸಲಾಗಿದೆ ಎಂದು ಸಂಸ್ಥೆ ಮಾರ್ಗದರ್ಶಕ ಪವನ ಕತ್ತಿ ತಿಳಿಸಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಕತ್ತಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಎಂಕಾಂ ವಿಭಾಗ ಪ್ರಾರಂಭಿಸಲಾಗಿದೆ. ಪ್ರಸಕ್ತ ವರ್ಷದಿಂದ ಎಂಕಾಂ ಕೋರ್ಸ್ ನಡೆಸಲು ಅನುಮತಿ ದೊರೆತಿದೆ ಎಂದರು.
ವಾಣಿಜ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಕೋರ್ಸ್ ಸಹಕಾರಿಯಾಗಿದೆ. ಕಲಿಕೆಗೆ ಬೇಕಾದ ವಿಶಾಲ ಆವರಣ, ಉತ್ತಮ ಗುಣಮಟ್ಟದ ಬೋಧಕ ಸಿಬ್ಬಂದಿ, ಉತ್ಕೃಷ್ಟ ಗುಣಮಟ್ಟದ ಗ್ರಂಥಾಲಯವನ್ನು ಮಹಾವಿದ್ಯಾಲಯ ಹೊಂದಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಮಹಾವಿದ್ಯಾಲಯ ಸದಾ ಶ್ರಮಿಸುತ್ತದೆ ಎಂದರು.
ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಕೆ.ಸಿ.ಮುಚಖಂಡಿ, ಪ್ರಾಚಾರ್ಯ ಡಾ.ವಿ.ಎಸ್.ಹೂಗಾರ, ಪದವಿ ಪ್ರಾಚಾರ್ಯ ಎಸ್.ಎಂ. ಭಂಗಿ, ಡಾ.ಯು.ಕೆ.ಪಾಟೀಲ ಇತರರು ಇದ್ದರು.