

ಸೂಲಿಬೆಲೆ : ಹೊಸಕೋಟೆ ತಾಲೂಕು ಕಂಬಳೀಪುರ ಗ್ರಾಪಂನ ಎಂ.ಸತ್ಯವಾರ ಗ್ರಾಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದಿಂದ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದ್ದು, ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶಾಸಕ ಶರತ್ ಬಚ್ಚೇಗೌಡ ಅವರೊಂದಿಗೆ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.
ಚನ್ನಬೈರೇಗೌಡರ ಕ್ಷೇತ್ರಕ್ಕೆ ಮಹಾಸಂಸ್ಥಾನದಿಂದ ಕೊಡುಗೆ ನೀಡುವ ಉದ್ದೇಶದಿಂದ ಎಂ.ಸತ್ಯವಾರದ ಗುಡ್ಡದ ಮೇಲಿರುವ ಪುರಾತನ ಮಹೇಶ್ವರ ದೇವಿ ಹಾಗೂ ಗಣಪತಿ ದೇವಾಲಯದ ಜೀಣೋರ್ದ್ಧಾರ ಮಾಡಲಾಗುವುದು. ಹೊಸಕೋಟೆಯ ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ವಿದ್ಯಾಸಂಸ್ಥೆಗಳ ಪ್ರಾರಂಭಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಮಠದ ಸುಪರ್ದಿಯಲ್ಲಿರುವ ಆಸ್ಪತ್ರೆಗಳಲ್ಲಿ ಎಲ್ಲ ವೈದ್ಯಕಿಯ ಚಿಕಿತ್ಸಾ ಸೇವೆಗಳು ಸಿಗುತ್ತಿದ್ದು, ರಾಜ್ಯದ ಎಲ್ಲ ಭಾಗಗಳಲ್ಲೂ ವೈದ್ಯಕಿಯ ಸೇವೆ ಸಿಗುವಂತೆ ಮಾಡಲಾಗುವುದು. ಬಡ ಮಕ್ಕಳಿಗೆ ಯಾವುದೇ ಭೇದಭಾವ ಇಲ್ಲದೇ ಕಡಿಮೆ ದರದಲ್ಲಿ ಉನ್ನತ ವ್ಯಾಸಂಗ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಉದ್ದೇಶ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ ಮಾತನಾಡಿ, ನಿರ್ಮಲಾನಂದನಾಥ ಶ್ರೀಗಳ ಆಶಯದಂತೆ ಎಂ.ಸತ್ಯವಾರ ಗ್ರಾಮದ ಗುಡ್ಡದ ಮೇಲ್ಭಾಗದಲ್ಲಿ 20 ಎಕರೆ ಪ್ರದೇಶವನ್ನು ಶಾಸಕ ಶರತ್ಬಚ್ಚೇಗೌಡ ಮಂಜೂರು ಮಾಡಿಸಿಕೊಟ್ಟಿದ್ದು, ಎಲ್.ಕೆ.ಜಿಯಿಂದ ಪದವಿಪೂರ್ವ, ಪದವಿ, ಉನ್ನತ ವ್ಯಾಸಂಗ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.
ತಾಲೂಕು ದಂಡಾಧಿಕಾರಿ ಸೋಮಶೇಖರ್, ಗ್ರಾಪಂ ಮಾಜಿ ಅಧ್ಯೆ ಮಮತಾ ಗೋಪಾಲ್, ಮಾಜಿ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ, ರಾಜಸ್ವ ನೀರಿಕ್ಷಕ ನ್ಯಾನಮೂರ್ತಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸಮೂರ್ತಿ, ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಹಸಿಗಾಳ ಜಗದೀಶ್, ಚಿಕ್ಕಹರಳಗೆರೆ ಜಗನ್ನಾಥ್, ಪಿಡಿಒ ಮಂಜುನಾಥ್, ಬಿಲ್ ಕಲೆಕ್ಟರ್ ಮಂಜುನಾಥ್, ಯುವ ಮುಖಂಡ ಚಂದ್ರು, ಕಂಬಳೀಪುರ ದೇವರಾಜ್ ಇದ್ದರು.
ಆಮೂಲಾಗ್ರ ಬದಲಾವಣೆ : ಎಂ.ಸತ್ಯವಾರದ ಸ.1 ಮತ್ತು 28ರಲ್ಲಿ 20 ಎಕರೆ ಪ್ರದೇಶವನ್ನು ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಚಿಂತನೆ ನಡಸಲಾಗಿದೆ. ಇದೇ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಆಶಯ ಮಹಾಸಂಸ್ಥಾನ ಹೊಂದಿದ್ದು, ಶ್ರೀಗಳು ಈ ಜಾಗದಲ್ಲಿರುವ ಪುರಾತನ ದೇವಾಲಯಗಳ ಜೀಣೋರ್ದ್ಧಾರ ಮಾಡಲಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನಲ್ಲಿ ಕೃಷಿ ಅವಲಂಬಿತ ಕುಟುಂಬಗಳು ಹೆಚ್ಚಾಗಿದ್ದು, ನೀರಿನ ಮೂಲಗಳು ಕಡಿಮೆಯಾಗಿದೆ. ಅಂತರ್ಜಲ ವೃದ್ಧಿಯ ದೃಷ್ಟಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕಾಗಿದೆ. ಈ ಬಗ್ಗೆ ಶ್ರೀಗಳು ವಿಶೇಷ ಕಾಳಜಿ ವಹಿಸಬೇಕಾಗಿ ಮನವಿ ಮಾಡುತ್ತೇವೆ. | ಶರತ್ ಬಚ್ಚೇಗೌಡ ಶಾಸಕ