ಡಾ.ಎಂ.ಬಿ.ಪುರಾಣಿಕ್ ದಂಪತಿಗೆ ಅಯೋಧ್ಯಾ ಯಾತ್ರೆಗೆ ಬೀಳ್ಕೊಡುಗೆ

ppppppppppp
Published on



ಮಂಗಳೂರು : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ದೇವರ ಭವ್ಯ ದೇಗುಲದ ಉದ್ಘಾಟನಾ ಸಮಾರಂಭ ಹಾಗೂ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ತೆರಳಲಿರುವ ನಗರದ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮತ್ತು ಅವರ ಪತ್ನಿ
ಸುನಂದಾ ಬಿ. ಪುರಾಣಿಕ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು. 1986 ಮತ್ತು 1992ರಲ್ಲಿ ಅಯೋಧ್ಯೆಯಲ್ಲಿ ನಡೆದ ಚಾರಿತ್ರಿಕ ಕರಸೇವೆಯಲ್ಲಿ ಪಾಲ್ಗೊಂಡು ರಾಜ್ಯಾದ್ಯಂತ ರಾಮ ಜನ್ಮಭೂಮಿ ಮುಕ್ತಿ ಆಂದೋಲನದ ನೇತೃತ್ವ ವಹಿಸಿದ್ದ ಡಾ.ಎಂ.ಬಿ.ಪುರಾಣಿಕ್ ಅವರಿಗೆ ಅಯೋಧ್ಯೆಯ ಶ್ರೀರಾಮ ದೇಗುಲ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಈ ಪವಿತ್ರ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನ ದೊರೆತಿದೆ.
ಶಾರದಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ ಮತ್ತು ಶಾರದಾ
ವಿದ್ಯಾಲಯದ ಹಿರಿಯ ಪ್ರಾಂಶುಪಾಲೆ ಸುನೀತಾ ವಿ. ಮಡಿ ಅಯೋಧ್ಯಾ ಯಾತ್ರೆಗೆ ಶುಭ ಹಾರೈಸಿದರು. ಡಾ. ಎಂ.ಬಿ.ಪುರಾಣಿಕ್ ಅವರು ತಮ್ಮ ಅಯೋಧ್ಯಾ ಹೋರಾಟದ ಅನುಭವಗಳನ್ನು ಹಂಚಿಕೊಂಡರು.
ಶಾರದಾ ಸಮೂಹ ಸಂಸ್ಥೆಗಳ ಆಡಳಿತ ಮಂಡಳಿಯ ವಿಶ್ವಸ್ಥರಾದ ಸುಧಾಕರ ರಾವ್ ಪೇಜಾವರ, ಆಡಳಿತ ನಿರ್ದೇಶಕ ಸಮೀರ್ ಪುರಾಣಿಕ್ ಉಪಸ್ಥಿತರಿದ್ದರು. ವಿದ್ಯಾಲಯದ ಸಂಗೀತ ಶಿಕ್ಷಕಿ ರಜನಿ ಮಲ್ಯ ಶ್ರೀರಾಮ ಭಜನೆ ಹಾಡಿದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net