ಬಿಸಿಯೂಟ ತಯಾರಕರಿಗೆ ಸಂಕಷ್ಟ :ವೇತನವಿಲ್ಲದೆ ಪರದಾಟ

bottle-1000x600
Published on

ತುಮಕೂರು: ಕರೊನಾ ಸಂಕಷ್ಟದಲ್ಲಿಯೂ ಶಾಲೆಗಳಲ್ಲಿ ಕರ್ತವ್ಯನಿರ್ವಹಿಸಿದ್ದ ಅಕ್ಷರ ದಾಸೋಹದ 6712 ಬಿಸಿಯೂಟ ತಯಾರಕರು, ಸಹಾಯಕರು ಕಳೆದೆರಡು ತಿಂಗಳಿನಿಂದ ವೇತನವಿಲ್ಲದೆ ಪರದಾಡುವ ಸ್ಥಿತಿಯಿದೆ.

ಕಳೆದ ಏಪ್ರಿಲ್‌ನಿಂದ ಅವರ ಸೇವೆ ಹಿಂಪಡೆಯಲಾಗಿದ್ದು, ಪ್ರತಿ ವರ್ಷ ಜೂನ್‌ನಲ್ಲಿ ನೀಡಲಾಗುತ್ತಿದ್ದು, ಮರುನೇಮಕ ಆದೇಶವೂ ಇನ್ನೂ ಕೈ ಸೇರಿಲ್ಲ. ವರ್ಷದಲ್ಲಿ ಹತ್ತು ತಿಂಗಳು ವೇತನ ಪಡೆದು ಅರೆಹೊಟ್ಟೆಯಲ್ಲಿ ಬದುಕು ಸಾಗಿಸುತ್ತಿದ್ದ ಸಿಬ್ಬಂದಿಗೆ ಆ ಹತ್ತು ತಿಂಗಳಿನಲ್ಲಿಯೂ ಕಡಿತ ಮಾಡಲಾಗುತ್ತಿರುವುದು ಆತಂಕ ಹೆಚ್ಚಿಸಿದೆ.

ರಾಜ್ಯಾದ್ಯಂತ 1.18 ಲಕ್ಷ ಬಿಸಿಯೂಟ ತಯಾರಕರಿದ್ದು, ಶಾಲೆಗಳಲ್ಲಿ ಅಡುಗೆ ಮಾಡುವ ಸಿಬ್ಬಂದಿಗೆ ಕನಿಷ್ಠ ವೇತನವೂ ಇಲ್ಲದೆ ಯಾವುದೇ ರೀತಿಯ ಸೌಲಭ್ಯಗಳು ದೊರೆಯುತ್ತಿಲ್ಲ, ಇಎಸ್‌ಐ ಪಿಂಚಣಿ ಸೌಲಭ್ಯಗಳು ಇಲ್ಲದಿರುವುದು ಶೋಚನೀಯ ವಿಷಯವಾಗಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಸಿಯೂಟ ತಯಾರಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜೂ.23ರಿಂದ ರಾಜ್ಯದೆಲ್ಲೆಡೆ ಪ್ರತಿಭಟನೆಗೆ ಮುಂದಾಗಿದ್ದು, ಶಾಲೆ, ಗ್ರಾಪಂ, ತಾಪಂ, ಜಿಪಂ ಮುಂಭಾಗ ಪ್ರತಿಭಟನೆ ನಡೆಸಲಿದೆ.

ಬಿಸಿಯೂಟ ನೌಕರರು ಕರೊನಾ ಸಂಕಷ್ಟದಲ್ಲಿಯೂ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದರೂ ಏಪ್ರಿಲ್, ಮೇ ತಿಂಗಳ ವೇತನ ನಿರಾಕರಿಸಿರುವುದು ಸಿಬ್ಬಂದಿಗೆ ತೀವ್ರ ತೊಂದರೆ ತಂದೊಡ್ಡಿದೆ. ಸರ್ಕಾರ ಮಾನವೀಯತೆಯಿಂದ ಚಿಂತಿಸಿ ಕೂಡಲೇ ಕಳೆದೆರಡು ತಿಂಗಳ ವೇತನ ನೀಡಲು ಆದೇಶಿಸಬೇಕು. ಕೆಂಚಮ್ಮ, ಬಿಸಿಯೂಟ ನೌಕರರ ಸಂಘ ಬಿಸಿಯೂಟ ಸಿಬ್ಬಂದಿಗೆ ವರ್ಷದಲ್ಲಿ 10 ತಿಂಗಳು ಸರ್ಕಾರದಿಂದ ವೇತನ ನೀಡಲಾಗುತ್ತಿದೆ, ಶಾಲೆ ನಡೆಯದ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿ, ಜೂನ್‌ನಲ್ಲಿ ಮತ್ತೆ ಸೇವೆ ಮುಂದುವರಿಸಲು ಆದೇಶ ನೀಡುವುದು ವಾಡಿಕೆ, ಈ ವರ್ಷ ಇನ್ನೂ ಸರ್ಕಾರದ ಆದೇಶ ಬಂದಿಲ್ಲ. ಜಿಲ್ಲೆಯಲ್ಲಿ ವೇತನ ಯಾವುದೂ ಬಾಕಿ ಉಳಿಸಿಕೊಂಡಿಲ್ಲ. ವಿ.ರುದ್ರಸ್ವಾಮಿ ಶಿಕ್ಷಣಾಧಿಕಾರಿ, ಅಕ್ಷರ ದಾಸೋಹ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net