ಹವ್ಯಾಸಿ ಸುಗಮ ಸಂಗೀತ ಗಾಯಕರಿಂದ ಗೀತಧಾರೆ

18
Published on

ಮೈಸೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಘಟಕದಿಂದ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ಆಯೋಜಿಸಿರುವ ಸುವರ್ಣ ಕರ್ನಾಟಕ ಸಂಭ್ರಮ ವಸ್ತು ಪ್ರದರ್ಶನದ ಸಾಂಸ್ಕೃತಿಕ ವೇದಿಕೆಯಲ್ಲಿ ಶನಿವಾರ ಹಾಗೂ ಭಾನುವಾರ ಹವ್ಯಾಸಿ ಸುಗಮ ಸಂಗೀತ ಗಾಯಕರಿಂದ ಗೀತಧಾರೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸುಗಮ ಸಂಗೀತ ಗಾಯಕರಲ್ಲಿ ಆತ್ಮವಿಶ್ವಾಸ ತುಂಬಲು ಪರಿಷತ್ತಿನ ಮೈಸೂರು ಘಟಕದ ಅಧ್ಯಕ್ಷ ಡಾ. ನಾಗರಾಜ್ ಬೈರಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 48 ಹವ್ಯಾಸಿ ಗಾಯಕರು ತಮ್ಮ ಪ್ರತಿಭೆ ಪ್ರದರ್ಶಿಸಿ ನಾಡಿನ ಹೆಸರಾಂತ ಕವಿಗಳ ಗೀತೆಗಳನ್ನು ಹಾಡಿದರು.
ಶಾಸಕ ಟಿ.ಎಸ್. ಶ್ರೀವತ್ಸ ಅವರು ಸುಗಮ ಸಂಗೀತ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕವಿಗಳ ಕವಿತೆಗಳನ್ನು ಹಾಡುವಂತೆ ಗಾಯಕರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಶ್ಲಾಘನೀಯ. ಮುಂದಿನ ದಸರಾ ವಸ್ತು ಪ್ರದರ್ಶನದಲ್ಲಿ ಪರಿಷತ್‌ನ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪರಿಷತ್ತಿನ ಉಪಾಧ್ಯಕ್ಷ ಗಂಗಾಧರಪ್ಪ, ಕಾರ್ಯದರ್ಶಿ ಸಿರಿ ಬಾಲು, ಮಾಧ್ಯಮ ಸಲಹೆಗಾರ ಎನ್.ಬೆಟ್ಟೇಗೌಡ, ಸಾಹಿತಿ ಜಯಪ್ಪ ಹೊನ್ನಾಳಿ, ತೀರ್ಪುಗಾರರಾಗಿದ್ದ ಡೇವಿಡ್, ಪ್ರತಿಭಾಂಜಲಿ, ಪ್ರೊ.ಎ.ಡಿ. ಶ್ರೀನಿವಾಸ್, ರಾಜೇಶ್ ಪಡಿಯಾರ್, ಇಂದ್ರಾಣಿ ಅನಂತರಾಮ್, ರಶ್ಮಿ ಚಿಕ್ಕಮಗಳೂರು ಅವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net