ಯಾವುದೇ ಕಾರಣಕ್ಕೂ ಸುಳ್ಳು ಹೇಳುವುದನ್ನು ಸಹಿಸಲ್ಲ: ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ

mysore
Published on

ಮೈಸೂರು: ನೆಪ ಮತ್ತು ಸುಳ್ಳು ಹೇಳುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಅಸಡ್ಡೆ, ಉದಾಸೀನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.


ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.


ಆತ್ಮಸಾಕ್ಷಿ ಮುಖ್ಯ ಎನ್ನುವ ಗಾಂಧಿಯವರ ಮಾತನ್ನು ಅಧಿಕಾರಿಗಳಿಗೆ ನೆನಪಿಸಿದ ಸಿಎಂ, ಎಲ್ಲ ನ್ಯಾಯಾಲಯಗಳಿಗಿಂತ ಜನತಾ ನ್ಯಾಯಾಲಯ ಮುಖ್ಯ. ಒಂದು ಸುಳ್ಳು ಹೇಳಿದರೆ ಅದನ್ನು ಸಮರ್ಥಿಸಲು ಮತ್ತೊಂದು, ಇನ್ನೊಂದು ಸುಳ್ಳು ಹೇಳುತ್ತಲೇ ಹೋಗಬೇಕಾಗುತ್ತದೆ. ಹೀಗಾಗಿ, ಸುಳ್ಳು, ನೆಪ ಹೇಳುವ ಅಧಿಕಾರಿಗಳು ಸಿಕ್ಕಿ ಬೀಳುತ್ತಾರೆ. ಇದು ನಿಮ್ಮ ವೃತ್ತಿ ಜೀವನಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.


ದಸರಾ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ಆಗಬಾರದು. ದಸರಾ ಜವಾಬ್ದಾರಿ ಇದ್ದವರನ್ನು ಹೊರತುಪಡಿಸಿ ಉಳಿದವರು ದಸರಾ ನೆಪದಲ್ಲಿ ಕಳ್ಳಾಟ ಆಡಬಾರದು ಎಂದು ಎಚ್ಚರಿಸಿದರು.

ಅಧಿಕಾರಿಗಳಿಗೆ ಜಾತಿ ಸೋಂಕು ಇರಬಾರದು:


ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ದರೆ ರಾಜ್ಯದ ಅಭಿವೃದ್ಧಿ ಮತ್ತು ಆರ್ಥಿಕತೆಯ ಪ್ರಗತಿ ಅಸಾಧ್ಯ. ರಾಜ್ಯದ ಬಂಡವಾಳ ಹೂಡಿಕೆಗೂ, ಕಾನೂನು-ಸುವ್ಯವಸ್ಥೆಗೂ ನೇರಾನೇರ ಸಂಬಂಧವಿದೆ. ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಜಾತಿ ಸೋಂಕು ಇರಬಾರದು. ಸಂವಿಧಾನ, ಜಾತ್ಯತೀತವಾಗಿ ಸರ್ಕಾರಿ ಕಾರ್ಯಕ್ರಮ, ಜನರ ಸೇವೆಯನ್ನು ಮಾಡಬೇಕು ಎಂದು ನಿರ್ದೇಶಿಸಿದರು.


ಮಧ್ಯವರ್ತಿಗಳಿಗೆ ಅವಕಾಶ ಇಲ್ಲ: ಆರೋಗ್ಯ, ಶಿಕ್ಷಣ, ಅನ್ನ, ನೀರು, ವಿದ್ಯುತ್, ರಸ್ತೆ, ಸುರಕ್ಷತೆ ನನ್ನ ಪ್ರಥಮ ಆದ್ಯತೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವೇ ಇಲ್ಲದಂತೆ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.


ಅಭಿವೃದ್ಧಿ ಕೆಲಸಗಳಿಗೂ ಹಣ ಹೇರಳವಾಗಿ ಬಿಡುಗಡೆ ಆಗುತ್ತಿದೆ. ಅನುದಾನ ಕೊಟ್ಟಾಗ ಕ್ರಿಯಾಯೋಜನೆ ಸಿದ್ಧವಾಗಿ ಇರಬೇಕು. ಇಲ್ಲವಾದರೆ ಅಂತಹ ಅಧಿಕಾರಿ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಸಿದರು.


ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಅಂತಹ ಅಧಿಕಾರಿ ಸಹಿಸಲ್ಲ. ಜಿಲ್ಲಾ ಮಂತ್ರಿಗಳೂ ಈ ವಿಚಾರದಲ್ಲಿ ದಾಕ್ಷಿಣ್ಯ ತೋರಿಸಬಾರದು ಎಂದು ಹೇಳಿದರು.

ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲಿಸಿ:


ಜಿಲ್ಲೆ ಕೃಷಿ ಕುರಿತು ಮಾಹಿತಿ ಪಡೆದ ಸಿಎಂ, ಕೆಳ ಹಂತದ ಅಧಿಕಾರಿಗಳು ಡೈರಿ ಬರೆಯುವುದು, ಜಮೀನುಗಳಿಗೆ ಭೇಟಿ ನೀಡುವುದನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಕೆಳ ಹಂತದ ಅಧಿಕಾರಿಗಳು ನೀಡುವ ವರದಿ ಆಧರಿಸಿ ಅಗತ್ಯ ಕಂಡರೆ ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.

ರೈತರ ಸಾವು, ಬೆಳೆ ಹಾನಿ ಕುರಿತು ನಿರ್ಲಕ್ಷಿಸಬೇಡಿ:


ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಇಲಾಖೆ ಅಧಿಕಾರಿಗಳು ಜನಸಂಪರ್ಕ ನಡೆಸಬೇಕು. ನೀವು ಜನರ ಮಧ್ಯೆ ಇದ್ದು ಕೆಲಸ ಮಾಡಲೇಬೇಕು. ಆಗ ಮಾತ್ರ ಪರಿಣಾಮಕಾರಿ ಕೆಲಸ ಸಾಧ್ಯ. ನೀವು ಜನಸಂಪರ್ಕ ಸಭೆ ನಡೆಸದೆ ಕೇವಲ ಸಭೆಗಳಲ್ಲಿ ಬಂದು ನೀವು ಹೇಳಿದ್ದನ್ನು ಕೇಳಿಕೊಂಡು ನಾವು ಹೋಗುವುದಿಲ್ಲ ಎಂದು ಕುಟುಕಿದರು.


ಮಾಧ್ಯಮಗಳಲ್ಲಿ ವರದಿ ಆಗಿರುವ ರೈತರ ಸಾವು, ಬೆಳೆ ಹಾನಿ ವರದಿಗಳನ್ನು ನಿರ್ಲಕ್ಷಿಸಬೇಡಿ. ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಸಚಿವ ಎಚ್.ಸಿ.ಮಹದೇವಪ್ಪ, ಎಂಎಲ್‌ಸಿ ಡಾ.ಯತೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.


ಸಾಲದಿಂದ ಜಿಲ್ಲೆಯಲ್ಲಿ 31 ರೈತರ ಆತ್ಮಹತ್ಯೆ ಆಗಿದೆ. ಸಮಿತಿ ಮುಂದೆ ಮಂಡಿಸಿದ 29 ಪ್ರಕರಣದಲ್ಲಿ 8 ಕೇಸ್‌ಗಳು ತಿರಸ್ಕೃತಗೊಂಡಿದ್ದು, 2ರಲ್ಲಿ ಎಫ್‌ಎಸ್‌ಎಲ್ ವರದಿ ಬರುವುದು ಬಾಕಿ. ಉಳಿದ ಕೇಸ್‌ಗಳಲ್ಲಿ ಪರಿಹಾರ ನೀಡಲಾಗಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು.
ತಿರಸ್ಕೃತಗೊಂಡ ಪ್ರಕರಣಗಳ ವಿವರಣ ಪಡೆದ ಸಿಎಂ, ಪಶುಸಂಗೋಪನೆ ಸಚಿವ ವೆಂಕಟೇಶ್ ಅವರು ಈ ಪ್ರಕರಣವನ್ನೂ ಪರಿಗಣಿಸಿ ಪರಿಹಾರ ಕೊಡಲಿ ಎಂದರು.

ಅಧಿಕಾರಿಯ ಡೈರಿ, ಫೋಟೋ ಕೇಳಿದ ಸಿಎಂ


ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಪರಿಶೀಲನೆ ನಡೆಸಬೇಕು. ರೈತರ ಸಭೆ ನಡೆಸಬೇಕು. ಇದನ್ನೆಲ್ಲ ನೀವು ಮಾಡಿದ್ದೀರಾ ಎಂದು ಕೃಷಿ ಅಧಿಕಾರಿಗೆ ಸಿಎಂ ಪ್ರಶ್ನಿಸಿದರು.


ಈ ವೇಳೆ ಕೃಷಿ ಅಧಿಕಾರಿ ತಾವು ಗ್ರಾಮಗಳಿಗೆ ಭೇಟಿಗೆ ಸಂಬಂಧಿಸಿದ ಡೈರಿ, ಫೋಟೋ ತೋರಿಸಿದರು. ಆದರೂ ಸಮಾಧಾನ ಆಗದ ಸಿಎಂ, ರೈತರ ಜಮೀನುಗಳಿಗೆ ಭೇಟಿ ನೀಡಿದಾಗ ರೈತರಿಗೆ ಹೆಚ್ಚು ತಿಳಿವಳಿಕೆ ಇದೆಯೇ? ನಿಮಗೆ ಹೆಚ್ಚು ತಿಳಿವಳಿಕೆ ಇದೆಯೇ ಎಂಬುದು ಗೊತ್ತಾಯ್ತಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಪ್ರಾಕ್ಟಿಕಲ್ ಆಗಿ ರೈತರು ಬುದ್ಧಿವಂತರು. ನಾವು ಅವರಿಂದ ಕಲಿಯುತ್ತೀವಿ ಎಂದರು.

ತಪ್ಪು ಮಾಹಿತಿ ಕೊಟ್ಟ ಅಧಿಕಾರಿ ವಿರುದ್ಧ ಕಿಡಿ:


ಸಭೆಗೆ ತಪ್ಪು ಮಾಹಿತಿ ಕೊಟ್ಟ ತೋಟಗಾರಿಕಾ ಇಲಾಖೆಯ ಅಧಿಕಾರಿಗೆ ಸಿಎಂ ತರಾಟೆ ತೆಗೆದುಕೊಂಡರು. ಸಭೆಗೆ ಹಿಂದಿನ ದಿನ ಸರಿಯಾದ ಹೋಂವರ್ಕ್ ಏಕೆ ಮಾಡಲಿಲ್ಲ? ಈ ರೀತಿ ತಪ್ಪು ಮಾಹಿತಿ ಮುದ್ರಿಸಿ ಸಭೆಗೆ ನೀಡಿದರೆ ನೀವೇ ಹೊಣೆ ಆಗಬೇಕಲ್ವೇ ಎಂದು ಸಿಎಂ, ಡಾ.ಯತೀಂದ್ರ ಪ್ರಶ್ನಿಸಿದರು. ಆ ಅಧಿಕಾರಿ ಕ್ಷಮೆ ಕೋರಿ ತಪ್ಪೊಪ್ಪಿಕೊಂಡು, ಮುಂದೆ ಯಡವಟ್ಟುಗಳು ಆಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದರು.

ರೇಷ್ಮೆ ಕೃಷಿ ಕುಸಿಯಲು ಕಾರಣ ಏನು?


ರೇಷ್ಮೆ ಬೆಳೆ ಪ್ರದೇಶ ವಿಸ್ತರಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಿಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ನಾವು ಇರುವ ಸಿಬ್ಬಂದಿಯಲ್ಲೇ 10 ಹಳ್ಳಿ ಆಯ್ಕೆ ಮಾಡಿಕೊಂಡು ವಿಸ್ತರಣೆಗೆ ಕೆಲಸ ಮಾಡುತ್ತಿದ್ದು, ನಾವೇ ಗೂಡುಗಳನ್ನು ನಿರ್ಮಿಸಿಕೊಟ್ಟು, ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ವಿವರಿಸಿದರು.


ಆಗ ಪಶು ಸಂಗೋಪನಾ ಸಚಿವರು, ಸಿಬ್ಬಂದಿ ಕೊರತೆ ಇದೆ ಎಂದರು. ಇದನ್ನು ಒಪ್ಪದ ಸಿಎಂ, ರೇಷ್ಮೆ ಕೃಷಿ ಕುಸಿಯಲು ಇದೊಂದೇ ಕಾರಣ ಅಲ್ಲ. ಬೇರೆ ಕಾರಣಗಳಿವೆ. ಅಧಿಕಾರಿಗಳು ಅವನ್ನೆಲ್ಲ ಗುರುತು ಮಾಡಿ ಪರಿಹಾರ ರೂಪಿಸಬೇಕು ಎಂದು ಸೂಚಿಸಿದರು.

ಹಳ್ಳಿ ಹಾಲು ಪಟ್ನಕ್ಕೆ, ಪಟ್ನದ್ ಸರಾಯಿ ಹಳ್ಳಿಗೆ


ಪಶು ಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಪಾರ್ಲಿಮೆಂಟಿನಲ್ಲಿ ನಡೆದಿದ್ದ ಚರ್ಚೆಯನ್ನು ಪ್ರಸ್ತಾಪಿಸಿದ ಸಿಎಂ, ಹಳ್ಳಿ ಜನರು ಉತ್ಪಾದನೆ ಮಾಡುವ ಹಾಲು ಪಟ್ಟಣಗಳಿಗೆ ಹೋಗಿದೆ. ಪಟ್ಟಣದಲ್ಲಿ ತಯಾರಾಗುವ ಸರಾಯಿ ಹಳ್ಳಿಗಳಿಗೆ ಬಂದಿದೆ. ಆದ್ದರಿಂದ ಹಸು ಸಾಕಾಣೆಕಾರರು ಮೊದಲು ಹಾಲನ್ನು ತಾವು ಕುಡಿದು, ತಮ್ಮ ಮಕ್ಕಳಿಗೂ ಕುಡಿಸಿ ಹೆಚ್ಚುವರಿ ಹಾಲನ್ನು ಮಾರಾಟ ಮಾಡಬೇಕು. ಆಗ ಮಾತ್ರ ಅವರಿಗೂ ಆರೋಗ್ಯಕರ ಹಾಲು ಸಿಗುತ್ತದೆ ಎಂದರು. ಈ ಬಗ್ಗೆ ರೈತರಲ್ಲಿ, ರೈತರ ಮಕ್ಕಳಲ್ಲಿ ಹಾಲು ಕುಡಿಯಲು ಜಾಗೃತಿ ಮೂಡಿಸಿ ಎಂದು ಸೂಚಿಸಿದರು.


ಹಾಲಿನ ಉಪ ಉತ್ಪನ್ನಗಳನ್ನು ಹೆಚ್ಚು ಉತ್ಪಾದಿಸಬೇಕು. ಹಾಲು ಒಕ್ಕೂಟಗಳಲ್ಲಿ ಅನಗತ್ಯ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆದು ಹಾಕಬೇಕು. ಹಾಲು, ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸಬೇಕು ಎಂದೂ ನಿರ್ದೇಶಿಸಿದರು. ಈ ವೇಳೆ ಮಾತನಾಡಿದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಪ್ರೋಟೀನ್ ಪೌಡರ್‌ಗೆ ಮಾರುಕಟ್ಟೆಗೆ ಬೇಡಿಕೆ ಇದೆ. ಇದರ ಉತ್ಪಾದನೆ, ಮಾರಾಟದ ಕಡೆ ಗಮನ ಕೊಡಿ ಎಂದರು.


ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು, ಜಿ.ಡಿ.ಹರೀಶ್‌ಗೌಡ, ಎಂಎಲ್‌ಸಿಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ವಿವೇಕಾನಂದ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net